ಮಂಗಳೂರು: ಪದವೀಧರ ಆಸಕ್ತ ಯುವಕರು, ಯುವತಿಯರಿಗೆ ರಾಜಕೀಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸುವುದಾಗಿ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಾಗುವಂತೆ ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವ ಆಲೋಚನೆ ಇದ್ದು, ಮುಂದಿನ ದಿನಗಳಲ್ಲಿ ಯೋಜನೆ ಜಾರಿ ಮಾಡಲಾಗುವುದು. ಸದ್ಯ ಪುಣೆಯಲ್ಲಿ ಇಂತಹ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅವರೊಂದಿಗೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಆರಂಭಿಸಲಾಗುತ್ತದೆ ಎಂದರು.
ರಾಜ್ಯದ ಪ್ರಮುಖ ಕೇಂದ್ರದಲ್ಲೇ ಈ ತರಬೇತಿ ಸಂಸ್ಥೆ ಆರಂಭಿಸಲಿದ್ದು, ಪಠ್ಯಕ್ರಮ, ಪ್ರಾಂಶುಪಾಲರು, ಪೂರ್ಣಕಾಲಿಕ ಉಪನ್ಯಾಸಕರು ಇರುತ್ತಾರೆ. ರಾಜಕೀಯ ನಾಯಕರು, ರಾಜಕೀಯ ಮುತ್ಸದ್ದಿಗಳು, ಹಿರಿಯ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ. ಪದವೀಧರರನ್ನು ನಾಯಕರನ್ನಾಗಿ ರೂಪಿಸಲಾಗುವುದು. ಅವರು ಸ್ಪೀಕರ್ ಕಚೇರಿ, ಸಚಿವರು, ಶಾಸಕರ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಇಂಟರ್ನ್ಶಿಪ್ ಮಾಡಲು ಅವಕಾಶ ನೀಡಬಹುದಾಗಿದೆ ಎಂದು ಹೇಳಿದ್ದಾರೆ.