ಬೆಂಗಳೂರು: ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರು ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ್ದು, ಪೌರಕಾರ್ಮಿಕರಿಗೆ ಗೌರವ ಸಲ್ಲಿಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರನ್ನು ವಿಧಾನಸಭೆ ಪ್ರೇಕ್ಷಕರ ಗ್ಯಾಲರಿಗೆ ಆಹ್ವಾನಿಸಿ ಗೌರವ ಸಲ್ಲಿಸಿದ್ದಾರೆ.
ಪ್ರತಿದಿನ ಒಂದೊಂದು ವರ್ಗಕ್ಕೆ ಕಲಾಪ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಯು.ಟಿ. ಖಾದರ್ ಇದರ ಭಾಗವಾಗಿ ಪೌರಕಾರ್ಮಿಕರು ಮತ್ತು ಆರೋಗ್ಯ ಗ್ಯಾಂಗ್ ಮನ್ ಗಳನ್ನು ಪ್ರೇಕ್ಷಕರ ಗ್ಯಾಲರಿಗೆ ಕರೆಸಿದ್ದಾರೆ. ಕಲಾಪ ವೀಕ್ಷಣೆಗೆ ಪೌರಕಾರ್ಮಿಕರನ್ನು ಸ್ವಾಗತಿಸಿದ್ದಾರೆ.
ಸ್ಪೀಕರ್ ಕ್ರಮವನ್ನು ಸ್ವಾಗತಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ನಮ್ಮ ಮೇಲಿನ ಅಂತಸ್ತಿನಲ್ಲಿ ಪೌರಕಾರ್ಮಿಕರು ಕುಳಿತುಕೊಂಡು ಶಾಸಕರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎಂದು ನೋಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಸೌಂದರ್ಯ. ಸಮ ಸಮಾಜ ನಿರ್ಮಾಣದ ಸಂದೇಶ ರವಾನಿಸುತ್ತದೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಭಾಧ್ಯಕ್ಷರ ಕ್ರಮವನ್ನು ಸ್ವಾಗತಿಸಿ, ವಿವಿಧ ವರ್ಗಗಳಿಗೆ ಕಲಾಪ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ. ತಾವು ಮುಖ್ಯಮಂತ್ರಿ ಆಗಿದ್ದಾಗ 11,000 ಪೌರಕಾರ್ಮಿಕರನ್ನು ಕಾಯಂಗೊಳಿಸಿ ನೇಮಕಾತಿ ಆದೇಶ ನೀಡಲಾಗಿತ್ತು. ಬಾಕಿ ಇರುವ 34 ಸಾವಿರ ಪೌರಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಹೇಳಿದ್ದಾರೆ.