ಎಸ್.ಪಿ.ಬಿ. ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಗೂ ಎಸ್ ಪಿ ಬಿ ಬಗ್ಗೆ ಗೊತ್ತಿದೆ. ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳ ಮೂಲಕ ಇಡೀ ದೇಶದ ಜನರ ಮನ ಗೆದ್ದ ಗಾಯಕ. ಹಾಡುಗಾರಿಕೆ ಅಷ್ಟೆ ಅಲ್ಲದೆ ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಡಬ್ಬಿಂಗ್ ಹೀಗೆ ಅನೇಕ ವಿಭಾಗದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ನಟನೆಗೆ ನಿಂತ್ರೆ ಎಂಥವರೂ ಅವರನ್ನು ಹಾಡಿ ಹೊಗಳುವಷ್ಟು ಅದ್ಬುತ ನಟ. ಬಾಲಸುಬ್ರಹ್ಮಣ್ಯಂ ಅವರು ಜೂನ್ 4, 1946 ರಲ್ಲಿ ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನಿಸಿದರು. ಅವರ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಪ್ರೇರಣೆಯಂತೆ.
ಇವರಿಗಿದ್ದ ಬೇಡಿಕೆ ಇನ್ಯಾರಿಗೂ ಇರಲಿಲ್ಲ ಎಂದು ಹೇಳಲಾಗುತ್ತಿತ್ತು. ಯಾಕಂದ್ರೆ ಎಸ್ ಪಿ ಬಿ ಒಂದೇ ದಿನದಲ್ಲಿ ಹದಿನೈದಕ್ಕೂ ಹೆಚ್ಚು ಹಾಡುವ ಸಾಮರ್ಥ್ಯ ಹೊಂದಿದ್ದ ಗಾಯಕ. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಸಾಧನೆ ಇವರದ್ದು. ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಯಲ್ಲಿ ಬಾಲು ಹಾಡಿದ್ದಾರೆ. ಯಾವುದೇ ಹೊಸ ಗಾಯಕರು ಬಂದರೂ ಬಾಲು ಸರ್ ಜೊತೆ ಹಾಡಬೇಕು ಎಂಬ ಹಂಬಲ ಇದ್ದೇ ಇರುತ್ತದೆ ಅಂತಹ ಅತ್ಯುತ್ತಮ ಗಾಯಕ ಎಸ್ ಪಿ ಬಿ. ವರನಟ ರಾಜ್ ಕುಮಾರ್ ಎಸ್ ಪಿ ಬಿ ಬಗ್ಗೆ ಸದಾ ಒಂದು ಮಾತು ಹೇಳ್ತಾ ಇದ್ರಂತೆ. ಎಸ್ ಪಿ ಬಿ ನನ್ನ ಆತ್ಮ ಇದ್ದ ಹಾಗೆ ನಾನು ಶರೀರ ಇದ್ದ ಹಾಗೆ ಅಂತಿದ್ರಂತೆ.
ಇನ್ನು ಇವರಿಗೆ ಬಂದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಇವರಿಗೆ ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, 25 ಬಾರಿ ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ, 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸೇರಿ ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಪ್ರಶಸ್ತಿಗಳು ಲಭಿಸಿವೆ. ಇನ್ನು ಎಸ್ ಪಿ ಬಿ ಯವರ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಎಂದೆಂದಿಗೂ ಫೇಮಸ್. ಯಾಕಂದ್ರೆ ಆ ಕಾರ್ಯಕ್ರಮದ ಮೂಲಕ ಬಂದ ಎಷ್ಟೋ ಪ್ರತಿಭೆಗಳು ಇಂದು ಗಾಯಕರಾಗಿದ್ದಾರೆ.
ಕೊರೊನಾ ತಗುಲಿದ ನಂತರ ಅವರ ಆರೋಗ್ಯ, ಹದಗೆಟ್ಟಿತ್ತು. ಇದರಿಂದ ಅವರ ಶ್ವಾಸಕೋಶಕ್ಕೆ ಗಂಭೀರವಾದ ಹಾನಿಯಾಗಿ ಉಸಿರಾಟಕ್ಕೆ ತೊಂದರೆಯಾಗಿತ್ತು. ಈ ಕಾರಣದಿಂದಾಗಿ ಅವರಿಗೆ ಹೆಚ್ಚುವರಿ ಆಮ್ಲಜನಕವನ್ನು ಪೂರೈಸಲು ಇಸಿಎಮ್‍ಓ ಸಾಧನವನ್ನು ಅಳವಡಿಸಿ, ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಉಸಿರಾಟ ತೊಂದರೆಯಿಂದ ಚಿಕಿತ್ಸೆ ಫಲಿಸದೆ 25 ಸೆಪ್ಟೆಂಬರ್ 2020 ರಂದು ಮರಣ ಹೊಂದಿದರು. ಭೌತಿಕವಾಗಿ ಅವರು ನಮ್ಮೆಲ್ಲರನ್ನು ಅಗಲಿರಬಹುದು. ಆದರೆ ಅವರ ನಟನೆ, ಗಾಯನ ಎಂದಿಗೂ ಮಾಸಲ್ಲ.