
ತನ್ನ ಮನೆಯಲ್ಲಿ ಅಗ್ನಿ ಅನಾಹುತವಾದ ವಿಚಾರವನ್ನು ತಿಳಿಸಲು ತುರ್ತು ಸಹಾಯವಾಣಿ 911ಕ್ಕೆ ಕರೆ ಮಾಡಿದ ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬರ ಕರೆ ಸ್ವೀಕರಿಸಿದಾತ ಆ ಕರೆಯನ್ನು ಕಟ್ ಮಾಡಿದ್ದಾನೆ. ಕಾರಣವೇನು ಗೊತ್ತಾ…?
ಅಲ್ಲೆನ್‌ಟೌನ್ ಪ್ರದೇಶದ ನಿವಾಸಿ ಸ್ಪಾನಿಶ್ ಭಾಷಿಕನಾಗಿದ್ದು, ಏಜೆಂಟ್‌ನೊಂದಿಗೆ ಇಂಗ್ಲಿಷ್‌ನಲ್ಲಿ ವ್ಯವಹರಿಸಲು ವಿಫಲನಾಗಿದ್ದಾನೆ.
ಹೆರಿಬರ್ಟೋ ಸ್ಯಾಂಟಿಯಾಗೋ ಹೆಸರಿನ ಈತ ಜುಲೈ 2020ರಂದು ಲೆಹೈ ಕೌಂಟಿಯ 911 ಸಹಾಯವಾಣಿಗೆ ಕರೆ ಮಾಡಿದ್ದಾರೆ. 14 ವರ್ಷ ವಯಸ್ಸಿನ ತಮ್ಮ ಸಹೋದರ ಸಂಬಂಧಿ ಆಂಡ್ರೆಸ್ ಜ಼ೇವಿಯರ್ ಜೊತೆಗೆ ವಾಸಿಸುತ್ತಿದ್ದ ಸ್ಯಾಂಟಿಯಾಗೋ ತಮ್ಮ ಮನೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಲೇ ಸಹಾಯ ಯಾಚಿಸಿ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಈ ವೇಳೆ ಫೋರ್ಕ್‌ಲಿಫ್ಟ್ ನಿರ್ವಹಕಿ ಸೋನ್ಯಾ ಒ’ಬ್ರಯಾನ್ ಅವರು ಸ್ಪಾನಿಷ್ ಭಾಷೆ ಅರ್ಥ ಮಾಡಿಕೊಳ್ಳದೇ ಇದ್ದಿದ್ದಲ್ಲದೇ, ಸ್ಪಾನಿಷ್ ಭಾಷಾ ಸಹಾಯವಾಣಿಯ ಬಳಕೆ ಮಾಡದೇ ಇದ್ದ ಕಾರಣದಿಂದ ಅವರ ಮೇಲೆ ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂಗ್ಲಿಷ್‌ನಲ್ಲಿ ಮಾತನಾಡು ಎಂದು ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಗೆ ಆಗ್ರಹಿಸಿದ ಸೋನ್ಯಾ, ಕೂಡಲೇ ಕರೆಯನ್ನು ಕಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೋನ್ಯಾಳ ಈ ಬೇಜವಾಬ್ದಾರಿಯ ವರ್ತನೆಯಿಂದಾಗಿ ಸ್ಯಾಂಟಿಯಾಗೋ ಹಾಗೂ ಆರ್ಟಿಜ಼್ ಪ್ರಾಣ ಹೋಗಿದ್ದು, ಸೂಕ್ತವಾದ ತರಬೇತಿಯನ್ನು ಆಕೆ ಪಡೆದಿಲ್ಲವಾದ ಕಾರಣ ಹೀಗೆ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಗ್ನಿ ಅವಘಡದ ಸಂದರ್ಭದಲ್ಲಿ ಅತಿಯಾದ ಹೊಗೆಯ ಸೇವನೆ ಹಾಗೂ ಕಾರ್ಬನ್ ಮೊನಾಕ್ಸೈಡ್ ವಿಷಾನೀಲದಿಂದಾಗಿ ಈ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪೆನ್ಸಿಲ್ವೇನಿಯಾದ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ಅಕ್ಟೋಬರ್ 20ರಂದು ದಾಖಲಿಸಲಾಗಿದೆ.