ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಆಗ್ರಾದ ಬಾಹ್ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇದಿಕೆಯಲ್ಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಮಾಜಿ ಸಚಿವ ರಾಮಜಿಲಾಲ್ ಸುಮನ್ ಜಿಲ್ಲಾಧ್ಯಕ್ಷ ಜಿತೇಂದ್ರ ವರ್ಮಾ ಅವರಿಗೆ ಕಪಾಳಮೋಕ್ಷ ಮಾಡಲು ಮುಂದಾದಾಗ ಸ್ಥಳದಲ್ಲಿ ವಿಚಿತ್ರ ವಾತಾವರಣ ನಿರ್ಮಾಣವಾಯಿತು. ಇದನ್ನು ನೋಡಿದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರಿಗೆ ನಗು ತಡೆಯಲಾಗಲಿಲ್ಲ.
ವಾಸ್ತವವಾಗಿ, ಅಖಿಲೇಶ್ ಯಾದವ್ ಆಗ್ರಾದ ಬಾಹ್ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಿದ್ದರು. ಇಲ್ಲಿ ರಾಮ್ಜಿ ಸುಮನ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅಖಿಲೇಶ್ ಯಾದವ್ ಹಾಗೂ ಜಿಲ್ಲಾಧ್ಯಕ್ಷ ಜಿತೇಂದ್ರ ವರ್ಮಾ ಇವರ ಮಾತನ್ನು ಕೇಳಿಸಿಕೊಳ್ಳದೆ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.
ಈ ವಿಷಯ ರಾಮ್ಜಿಲಾಲ್ಗೆ ಇಷ್ಟವಾಗಲಿಲ್ಲ. ಅವರ ಭಾಷಣದ ವೇಳೆಯೆ ಎರಡು ಬಾರಿ ಮಾತನಾಡಬೇಡಿ ಎಂದು ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿದ್ದರು. ಆದರೆ ಜಿತೇಂದ್ರ ವರ್ಮಾ ಅವರು ಅಖಿಲೇಶ್ ಜೊತೆ ಮಾತನಾಡುವುದನ್ನು ನಿಲ್ಲಿಸದಿದ್ದಾಗ ರಾಮ್ಜಿಲಾಲ್ ಮೈಕ್ ಬಿಟ್ಟು ಜಿಲ್ಲಾಧ್ಯಕ್ಷರ ಬಳಿ ಬಂದು ಕಪಾಳಮೋಕ್ಷ ಮಾಡುವಂತೆ ಕೈ ಎತ್ತಿದರು.
ರಾಮಜಿಲಾಲ್ ಅವರ ನಡೆಗೆ ಕೆಲ ಸೆಕೆಂಡುಗಳ ಕಾಲ ಅಖಿಲೇಶ್ ಹಾಗೂ ವರ್ಮಾ ತಬ್ಬಿಬ್ಬಾದರು, ಮರುಕ್ಷಣವೇ ಜೋರಾಗಿ ನಗತೊಡಗಿದರು. ಆ ನಂತರ ಇಬ್ಬರೂ ಮಾತು ನಿಲ್ಲಿಸಿದರು. ಎಲ್ಲರ ಭಾಷಣದ ನಂತರ ಅಖಿಲೇಶ್ ಯಾದವ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.