
ಲಖನೌ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ನಡೆಯುತ್ತಿರುವ ಮಹಾ ಕುಂಭಮೇಳದ ಅವಧಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 50 ಕೋಟಿ ದಾಟಿದ್ದು, ವಿಶ್ವ ದಾಖಲೆ ಸೃಷ್ಟಿಯಾಗಿದೆ. ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಕುಂಭಮೇಳದ ಅವಧಿಯನ್ನು ವಿಸ್ತರಿಸಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇನ್ನೂ ಕೋಟ್ಯಂತರ ಜನರು ಕುಂಭಮೇಳಕ್ಕೆ ಭೇಟಿ ನೀಡಲು ಬಯಸುತ್ತಿದ್ದಾರೆ. ಆದರೆ, ಭಾರಿ ಜನದಟ್ಟಣೆಯಿಂದಾಗಿ ಅದು ಸಾಧ್ಯವಾಗಿಲ್ಲ. ಫೆಬ್ರವರಿ 26ಕ್ಕೆ ಮುಕ್ತಾಯವಾಗಲಿರುವ ಕುಂಭಮೇಳದ ಅವಧಿಯನ್ನು ವಿಸ್ತರಿಸಬೇಕು. ಈ ಹಿಂದೆ 75 ದಿನಗಳ ಕಾಲ ಕುಂಭಮೇಳ ನಡೆದ ಉದಾಹರಣೆಗಳಿವೆ ಎಂದು ಅವರು ಹೇಳಿದ್ದಾರೆ.
ಜನವರಿ 29ರಂದು ಕಾಲ್ತುಳಿತದಿಂದ 30 ಜನ ಸಾವಿನಪ್ಪಿದ ಘಟನೆಯ ನಂತರವೂ ಪ್ರತಿದಿನ ಲಕ್ಷಾಂತರ ಜನ ಕುಂಭಮೇಳಕ್ಕೆ ಬರುತ್ತಿದ್ದಾರೆ. ವಿಶೇಷ ದಿನಗಳು ಮುಕ್ತಾಯವಾದ ಹಿನ್ನೆಲೆಯಲ್ಲಿ ಜನರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ.
ಸಂಚಾರ ಮತ್ತು ಜನದಟ್ಟಣೆ ನಿರ್ವಹಣೆಯಲ್ಲಿನ ಲೋಪದಿಂದ ಪ್ರಯಾಗ್ ರಾಜ್ ಜಿಲ್ಲೆಯ ನಿವಾಸಿಗಳಿಗೆ ಪುಣ್ಯ ಸ್ನಾನ ಮಾಡಲು ಸಾಧ್ಯವಾಗಿಲ್ಲ. ಮಹಾ ಕುಂಭಮೇಳ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಜನವರಿ 13ರಂದು ಆರಂಭವಾದ ಕುಂಭಮೇಳ ಶಿವರಾತ್ರಿ ದಿನವಾದ ಫೆಬ್ರವರಿ 26ರಂದು ಮುಕ್ತಾಯವಾಗಲಿದೆ. ಮಹಾಕುಂಭ ಮೇಳಕ್ಕೆ ಭೇಟಿ ನೀಡಲು ಬಯಸಿರುವ ಜನರಿಗೆ ಅನುಕೂಲವಾಗುವಂತೆ ಅವಧಿಯನ್ನು ವಿಸ್ತರಿಸಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.