ಇತ್ತೀಚಿಗೆ ಉತ್ತರಪ್ರದೇಶದ ಕೊನೆಯ ಹಂತದ ಚುನಾವಣೆ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ಪಕ್ಷ ಇವಿಎಂ ಟ್ಯಾಂಪರಿಂಗ್ ಸೇರಿದಂತೆ ಹಲವು ದುಷ್ಕೃತ್ಯ ಎಸಗುತ್ತಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.
ಅಖಿಲೇಶ್ ಆರೋಪದ ನಂತರ ವಿಚಿತ್ರ ಘಟನೆಯೊಂದು ನಡೆದಿದ್ದು ಮೀರತ್‌ನ ಹಸ್ತಿನಾಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ, ಇವಿಎಂ ಇರಿಸಿರುವ ಸ್ಟ್ರಾಂಗ್‌ರೂಮ್ ಎದುರು ಬೈನಾಕುಲರ್ ಹಿಡಿದು ಕಾವಲಿಗೆ ನಿಂತಿದ್ದಾರೆ. ಈ ಅಸಹಜ ಘಟನೆಯ ವಿಡಿಯೋ ಹೊರಬಿದ್ದಿದ್ದು ಹಸ್ತಿನಾಪುರದ ಅಭ್ಯರ್ಥಿ ಯೋಗೇಶ್ ವರ್ಮಾ, ಸ್ಟ್ರಾಂಗ್‌ರೂಮ್‌ನಿಂದ ಸ್ವಲ್ಪ ದೂರದಲ್ಲಿ ತಮ್ಮ ಕಾರು ನಿಲ್ಲಿಸಿ ಕಾರಿನಲ್ಲೇ ಬೈನಾಕುಲರ್ ಹಿಡಿದು ಕೂತು ನಿಗಾ ಇಡುತ್ತಿರುವುದು ಕಂಡುಬಂದಿದೆ.
ಕೆಲವು ಜಿಲ್ಲೆಗಳಲ್ಲಿನ ಅಧಿಕಾರಿಗಳು ಹಿರಿಯ ಅಧಿಕಾರಿಯೊಬ್ಬರ ಆದೇಶದ ಮೇರೆಗೆ ಇವಿಎಂ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಈ ಹಿರಿಯ ಅಧಿಕಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು ಎಂದು ಆರೋಪಿಸಿರುವ ಅಖಿಲೇಶ್, ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್‌ರೂಮ್ ಗಳ ಬಳಿ ಜಾಗರೂಕರಾಗಿ ಕಾವಲು ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಆದೇಶಿಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿರುವ ವಾರಣಾಸಿಯ ಪಹಾಡಿಯಾ ಮಂಡಿ ಬಳಿ, ಇವಿಎಂ ತುಂಬಿದ್ದ ಎರಡು ಟ್ರಕ್‌ಗಳನ್ನು ಎಸ್‌ಪಿ ಕಾರ್ಯಕರ್ತರು ವಶಕ್ಕೆ ಪಡೆದ ನಂತರ ಅಖಿಲೇಶ್ ಈ ಆರೋಪ ಮಾಡಿದ್ದಾರೆ.