ಗೋಲ್ಡ್ ಬಾಂಡ್ ಗಳ ಚಂದಾದಾರರಾಗಲು ಏಳನೇ ಸುತ್ತಿನ ಪ್ರಕ್ರಿಯೆಯು ಸೋಮವಾರ, ಅಕ್ಟೋಬರ್ 25, 2021ರಲ್ಲಿ ಆರಂಭವಾಗಲಿದೆ. ಈ ಚಂದಾದಾರಿಕೆ ಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 29, 2021 ಆಗಿದೆ.
ಚಿನ್ನದ ಬಾಂಡ್ನ ಮುಖಬೆಲೆಯನ್ನು ಭಾರತೀಯ ಚಿನ್ನಾಭರಣಗಳ ಸಂಘಟನೆ (ಐಬಿಜೆಎ), 999 ಶುದ್ಧತೆಯ ಚಿನ್ನಕ್ಕೆ, 4,761 ರೂ./ಗ್ರಾಂ ಎಂದು ನಿಗದಿ ಪಡಿಸಿದೆ.
ಆನ್ಲೈನ್ ಮೂಲಕ ಚಂದಾದಾರರಾಗಲು ಅರ್ಜಿ ಸಲ್ಲಿಸುವ ಮಂದಿಗೆ ಪ್ರತಿ ಗ್ರಾಂ ಚಿನ್ನದ ಮೇಲೆ 50 ರೂ.ಗಳ ವಿನಾಯಿತಿ ನೀಡಲಾಗುವುದು. ಪಾವತಿಯನ್ನು ಡಿಜಿಟಲ್ ಆಗಿ ಮಾಡಬಹುದಾಗಿದೆ. ಇಂಥ ಹೂಡಿಕೆದಾರರಿಗೆ ಚಿನ್ನದ ಬಾಂಡ್ ಅನ್ನು 4,711 ರೂ. ನಂತೆ ನೀಡಲಾಗುವುದು.
ಗ್ರಾಂಗಳ ಲೆಕ್ಕದ ಮೇಲೆ ಚಿನ್ನದ ಮೇಲೆ ಸರ್ಕಾರ ನೀಡುವ ಭದ್ರತೆಯೇ ಈ ಸಾವರಿನ್ ಚಿನ್ನದ ಬಾಂಡ್ಗಳಾಗಿವೆ. ಚಿನ್ನವನ್ನು ದೈಹಿಕವಾಗಿ ಇಟ್ಟುಕೊಳ್ಳುವ ಬದಲಾಗಿ ಈ ಬಾಂಡ್ಗಳನ್ನು ಇಟ್ಟುಕೊಳ್ಳಬಹುದಾಗಿದೆ. ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಈ ಬಾಂಡ್ಗಳನ್ನು ವಿತರಿಸಲಿದೆ.
ವೈಯಕ್ತಿಕ ಮಟ್ಟದಲ್ಲಿ ಕನಿಷ್ಠ 1ಗ್ರಾಂನಿಂದ ಹಿಡಿದು ಗರಿಷ್ಠ 4ಕೆಜಿಯಷ್ಟು ಹಾಗೂ ಸಂಸ್ಥೆಗಳಾದರೆ ಗರಿಷ್ಠ 20ಕೆಜಿಯಷ್ಟು ಚಿನ್ನವನ್ನು ಬಾಂಡ್ ರೂಪದಲ್ಲಿ ಪ್ರತಿ ವಿತ್ತೀಯ ವರ್ಷದಲ್ಲಿ ಪಡೆಯಬಹುದಾಗಿದೆ.