ಬಂಗಾರ ಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಇಂದಿನಿಂದ ಕಡಿಮೆ ಬೆಲೆಗೆ ಬಂಗಾರ ಖರೀದಿಸಲು ಅವಕಾಶ ಸಿಗ್ತಿದೆ. ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆ 2021-22ರ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭವಾಗುತ್ತಿದೆ. ಇದು ಜುಲೈ 16 ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಚಿನ್ನದ ವಿತರಣಾ ಬೆಲೆ ಪ್ರತಿ ಗ್ರಾಂಗೆ 4,807 ರೂಪಾಯಿ ನಿಗದಿ ಮಾಡಲಾಗಿದೆ.
ಅಂದ್ರೆ 10 ಗ್ರಾಂ ಬೆಲೆ 48070 ರೂಪಾಯಿಯಾಗಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೆ ಪ್ರತಿ ಗ್ರಾಂಗೆ 50 ರೂಪಾಯಿಗಳ ರಿಯಾಯಿತಿ ಸಿಗಲಿದೆ. 10 ಗ್ರಾಂಗೆ 500 ರೂಪಾಯಿ ರಿಯಾಯಿತಿ ಸಿಗಲಿದೆ. ಇಂದು ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 48000 ರೂಪಾಯಿಯಿದೆ.
ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಎರಡು ಪ್ರಯೋಜನಗಳಿವೆ. ಮೊದಲನೆಯದಾಗಿ, ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾದಂತೆ ಹೂಡಿಕೆಯ ಮೌಲ್ಯ ಹೆಚ್ಚಾಗುತ್ತದೆ. ಇನ್ನೊಂದು ವಾರ್ಷಿಕ ಶೇಕಡಾ 2.5ರಷ್ಟು ಬಡ್ಡಿ ಸಿಗಲಿದೆ. ಬಡ್ಡಿ ಅರ್ಧ ವಾರ್ಷಿಕದ ಆಧಾರದ ಮೇಲೆ ಸಿಗಲಿದೆ.
ಸಾರ್ವಭೌಮ ಚಿನ್ನದ ಬಾಂಡ್ ಮುಕ್ತಾಯದ ಅವಧಿ 8 ವರ್ಷಗಳು. ಆದರೆ ಐದು ವರ್ಷಗಳ ನಂತರ ನೀವು ಈ ಯೋಜನೆಯಿಂದ ಹೊರಗೆ ಬರಬಹುದು. ಸಾರ್ವಭೌಮ ಗೋಲ್ಡ್ ಬಾಂಡ್‌ನಲ್ಲಿ, ಹೂಡಿಕೆದಾರರು ಕನಿಷ್ಠ ಒಂದು ಗ್ರಾಂ ಚಿನ್ನವನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಗತ್ಯವಿದ್ದರೆ ಹೂಡಿಕೆದಾರರು ಚಿನ್ನದ ಬಾಂಡ್ ಮೇಲೆ ಸಾಲ ಪಡೆಯಬಹುದು.