ನವದೆಹಲಿ: ನೈಋತ್ಯ ಮುಂಗಾರು ಈ ಬಾರಿ ವಾಡಿಕೆಗೆ ಮೊದಲೇ ಕೇರಳ ಪ್ರವೇಶಿಸಲಿದೆ. ಮೇ 27 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಪೂರ್ವ ವಾತಾವರಣ ಕಂಡುಬಂದಿದ್ದು, ಈ ಬಾರಿ ಬೇಗನೆ ಮುಂಗಾರು ಆಗಮನವಾಗಲಿದೆ. ವಾಡಿಕೆಯಂತೆ ಜೂನ್ 1 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಬೇಕಿತ್ತು. ಈ ಬಾರಿ ಐದು ದಿನಗಳ ಮೊದಲೇ ಮೇ 27ರಂದು ಮುಂಗಾರು ಕೇರಳ ಪ್ರವೇಶಿಸಲಿದೆ.
ಮೇ 15ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿರುವ ನೈಋತ್ಯ ಮುಂಗಾರು ಮಾರುತಗಳು ಮುಂದುವರೆಯಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ. ವಾಯುವ್ಯ ಭಾರತದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಇದೇ ವೇಳೆ ಅವಧಿಗೆ ಮೊದಲೇ ಮುಂಗಾರು ಆಗಮನದ ಮುನ್ಸೂಚನೆ ಸಿಕ್ಕಿದೆ.
ಇತ್ತೀಚೆಗೆ ರಾಜ್ಯದ ಹಲವೆಡೆ ಮಳೆಯಾಗಿದ್ದು, ರೈತರು ಬಿತ್ತನೆಗೆ ಜಮೀನು ಸಿದ್ಧಮಾಡಿಕೊಂಡಿದ್ದಾರೆ. ಮುಂಗಾರು ಆಗಮನವಾಗುತ್ತಿದ್ದಂತೆ ಈಗಾಗಲೇ ಆರಂಭವಾಗಿರುವ ಕೃಷಿ ಚಟುವಟಿಕೆ ಚುರುಕುಗೊಳ್ಳಲಿವೆ ಎನ್ನಲಾಗಿದೆ.