ನೇರಪ್ರಸಾರದ ಸಮಯದಲ್ಲಿ ಮುಂಬೈನಲ್ಲಿ ಇಬ್ಬರು ಯುವಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ದಕ್ಷಿಣ ಕೊರಿಯಾದ ಯೂಟ್ಯೂಬರ್ ಹ್ಯೋಜಿಯಾಂಗ್ ಇದೀಗ ತಮ್ಮನ್ನು ರಕ್ಷಿಸಿದ ಭಾರತೀಯ ಹುಡುಗರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕಳೆದ ನವೆಂಬರ್ 29 ರಂದು ಮುಂಬೈನ ಖಾರ್ ಪ್ರದೇಶದಲ್ಲಿ ತಮ್ಮ ಯೂಟ್ಯೂಬ್ ನಿಮಿತ್ತ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡು ರಸ್ತೆಯಲ್ಲಿ ಮೋಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂಬ ಇಬ್ಬರು ಯುವಕರು ಹ್ಯೋಜಿಯಾಂಗ್ಳ ಕೈ ಹಿಡಿದು ಕಿಸ್ ಮಾಡಿದ್ದರ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡು ನೋವು ತೋಡಿಕೊಂಡಿದ್ದರು. ಈಗ ತಮ್ಮ ರಕ್ಷಣೆಗೆ ಇಬ್ಬರು ಭಾರತೀಯ ಯುವಕರು ಧಾವಿಸಿರುವ ಬಗ್ಗೆ ಈಕೆ ಶೇರ್ ಮಾಡಿಕೊಂಡಿದ್ದಾರೆ.
ನೇರ ಪ್ರಸಾರದ ಸಮಯದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗುತ್ತಿದ್ದುದನ್ನು ಗಮನಿಸಿದ ಭಾರತೀಯ ಯುವಕರು ನನ್ನನ್ನು ರಕ್ಷಣೆ ಮಾಡಿದ್ದು, ಅವರಿಗೆ ಧನ್ಯವಾದ ಎಂದು ಈಕೆ ಬರೆದುಕೊಂಡಿದ್ದಾರೆ. ಆದಿತ್ಯ ಮತ್ತು ಅಥರ್ವ ಅವರೊಂದಿಗೆ ಊಟ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
“ಆದಿತ್ಯ ಮತ್ತು ಅಥರ್ವ ಎಂದರೆ ಭಾರತ. ಧೈರ್ಯಶಾಲಿಗಳಿಗೆ ಅಭಿನಂದನೆಗಳು” ಎಂದು ಬಳಕೆದಾರರು ಕಮೆಂಟ್ ಮಾಡುತ್ತಿದ್ದು, ಅಭಿನಂದನೆ ಸಲ್ಲಿಸುತ್ತಿದ್ದಾರೆ.