ಬೆಂಗಳೂರು : ಕರ್ನಾಟಕದಲ್ಲಿ ಹೂಡಿಕೆ ಮಾಡಲು ದಕ್ಷಿಣ ಕೊರಿಯಾ ಒಲವು ತೋರಿಸಿದ್ದು, ಹಲವು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ.
ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಸೋಮವಾರ ಸಿಯೊಲ್ನಲ್ಲಿ ಹೊಯ್ಸಂಗ್ ಅಡ್ವಾನ್ಸ್ಡ್ ಮೆಟಿರಿಯಲ್ಸ್, ಎಚ್ಎಲ್ ಮಾಂಡೋ ಕಾರ್ಪೊರೇಷನ್, ನಿಫ್ಕೊ, ಹುಂಡೈ ಮೋಟಾರ್ಸ್ ಮತ್ತಿತರ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಎಂ.ಬಿ ಪಾಟೀಲ್, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಹನಗಳ ಪ್ಲಾಸ್ಟಿಕ್ ಬಿಡಿಭಾಗ ತಯಾರಿಸುವ ಘಟಕ ಸ್ಥಾಪಿಸಲಿರುವ ನಿಫ್ಕೊ ಕೊರಿಯಾ ಕಂಪನಿಗೆ ಅಗತ್ಯವಾಗಿ ಭೂಮಿ ಸ್ವಾಧೀನ ಮತ್ತು ಇತರ ಅನುಮೋದನೆಗಳಿಗೆ ರಾಜ್ಯ ಸರ್ಕಾರ ತ್ವsರಿತವಾಗಿ ಸ್ಪಂದಿಸಲಿದೆ. ಕಾರ್ಖಾನೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ರಾಜ್ಯದಲ್ಲಿ ಫೈಬರ್ ಆಪ್ಟಿಕ್ ಅಳವಡಿಕೆ ಯೋಜನೆಗಳು ಮತ್ತು ಇವಿ ಬಳಕೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹೊಯ್ಸಂಗ್ ಅಡ್ವಾನ್ಸ್ಡ್ ಮೆಟಿರಿಯಲ್ಸ್ ಆಸಕ್ತಿ ತೋರಿದೆ ಎಂದು ತಿಳಿಸಿದ್ದಾರೆ.