ಒಂದೇ ಬಾರಿಗೆ ತಾನು 10 ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿದ್ದ ದಕ್ಷಿಣ ಆಫ್ರಿಕಾ ಮಹಿಳೆಯ ಮಾತು ಸುಳ್ಳು ಎಂದು ಸಾಬೀತಾಗಿದೆ. ಈ ರೀತಿಯ ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದ ಮಹಿಳೆಯನ್ನ ಮನೋವೈದ್ಯರ ವಾರ್ಡ್ನಲ್ಲಿ ಇಡಲಾಗಿದ್ದು ಆಕೆಯ ಮೇಲೆ ನಿಗಾ ಇಡಲಾಗಿದೆ.
ಜಾನ್ಸನ್ ಬರ್ಗ್ನ ನಿವಾಸಿ 37 ವರ್ಷದ ಗೋಸೈಮ್ ಥಮಾರಾ ಸಿಟ್ಹೋಲ್ ಎಂಬಾಕೆ ತಾನು ಒಂದೇ ಹೆರಿಗೆಯಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೊಂದು ವಿಶ್ವ ದಾಖಲೆ ನಿರ್ಮಿಸುವಂತಹ ಹೇಳಿಕೆ ಆಗಿದ್ದರಿಂದ ಈ ಸುದ್ದಿ ಬಹು ಬೇಗನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಪರಿಶೀಲನೆ ನಡೆಸಿದ ಸ್ಥಳೀಯ ಸರ್ಕಾರ ಗೌಟೆಂಗ್ ಪ್ರಾಂತ್ಯದ ಯಾವುದೇ ಆಸ್ಪತ್ರೆಯಲ್ಲಿಯೂ 10 ಮಕ್ಕಳ ಜನನವಾಗಿಲ್ಲ ಎಂದು ಹೇಳಿದೆ. ಅಲ್ಲದೇ ಸದ್ಯ ಆಕೆ ಗರ್ಭಿಣಿ ಕೂಡ ಆಗಿರಲಿಲ್ಲ ಅನ್ನೋದು ಸಹ ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಗಿದೆ. ಹೀಗಾಗಿ ಆಕೆಯ ಮಾನಸಿಕ ಆರೋಗ್ಯವನ್ನ ಪರೀಕ್ಷೆ ಮಾಡುವ ಸಲುವಾಗಿ ಆಕೆಯನ್ನ ನಿಗಾದಲ್ಲಿ ಇಡಲಾಗಿದೆ.
ಜೂನ್ 8ನೇ ತಾರೀಖಿನಂದು ಈಕೆ ತಾನು 10 ಮಕ್ಕಳಿಗೆ ಒಂದೇ ಹೆರಿಗೆಯ ಮೂಲಕ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನ ವೇಗದಲ್ಲಿ ಹರಿದಾಡಿತ್ತು. ಅಲ್ಲದೇ ಆಕೆಗೆ ದೇಣಿಗೆಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಆಕೆ ಮಕ್ಕಳ ಯಾವುದೇ ಫೋಟೋಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿರಲಿಲ್ಲ. ಅಥವಾ 10 ಮಕ್ಕಳ ಜನನದ ಬಗ್ಗೆ ಯಾವುದೇ ಸಾಕ್ಷ್ಯ ಕೂಡ ಒದಗಿಸಿರಲಿಲ್ಲ.