ಈ ವಾರದ ಅಂತ್ಯದಲ್ಲಿ ಜರುಗಲಿರುವ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮವನ್ನ ಬಹಿಷ್ಕರಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ.
ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸೇರಿದಂತೆ ಹತ್ತೊಂಬತ್ತು ವಿರೋಧ ಪಕ್ಷಗಳು ಈ ವಾರಾಂತ್ಯದಲ್ಲಿ ದೆಹಲಿಯಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು ಉದ್ದೇಶಿಸಿರುವುದಾಗಿ ಬುಧವಾರ ಬೆಳಿಗ್ಗೆ ತಿಳಿಸಿವೆ. ಕೇಂದ್ರ ಸರ್ಕಾರವನ್ನು ಟೀಕಿಸಿರುವ ವಿಪಕ್ಷಗಳು ಪ್ರಧಾನಮಂತ್ರಿಯ ಪರಮಾಧಿಕಾರವನ್ನ ಪ್ರಶ್ನಿಸಿವೆ.
ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕು. ಆದರೆ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯಲ್ಲೂ ಅವರನ್ನ ಬದಿಗಿಡಲಾಗಿತ್ತು. ಇದೀಗ ಮೇ 28 ರಂದು ನೂತನ ಸಂಸತ್ ಭವನವನ್ನು ಪ್ರಧಾನಮಂತ್ರಿಗಳೇ ಉದ್ಘಾಟಿಸುತ್ತಿದ್ದು ಮತ್ತೆ ರಾಷ್ಟ್ರಪತಿಗಳನ್ನು ಹೊರಗಿಡಲಾಗಿದೆ. ಇದು ಅಸಂವಿಧಾನಿಕ ಎಂದು ವಿಪಕ್ಷಗಳು ಆರೋಪಿಸಿವೆ.
ನರೇಂದ್ರ ಮೋದಿಯವರು ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ನಿರ್ಧಾರದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ. ಇದು ಘೋರ ಅವಮಾನ ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವದ ಮೇಲೆ ನೇರ ಆಕ್ರಮಣವಾಗಿದೆ ಎಂದಿವೆ.
ಸಂವಿಧಾನದ 79 ನೇ ವಿಧಿಯನ್ನು ಉಲ್ಲೇಖಿಸಿ ವಿರೋಧ ಪಕ್ಷಗಳು, ರಾಷ್ಟ್ರಪತಿ ದ್ರೌಪತಿ ಮುರ್ಮು ರಾಷ್ಟ್ರದ ಮುಖ್ಯಸ್ಥರು ಮಾತ್ರವಲ್ಲದೆ ಸಂಸತ್ತಿನ ಅವಿಭಾಜ್ಯ ಅಂಗ. ಅವರು ಸಂಸತ್ತಿನ ಸಭೆ ಕರೆಯುತ್ತಾರೆ. ಜಂಟಿ ಅದಿವೇಶನ ಉದ್ದೇಶಿಸಿ ಮಾತನಾಡುತ್ತಾರೆ. ಸಂಸತ್ತಿನ ಕಾಯಿದೆ ಜಾರಿಗೆ ಬರಲು ಅವರು ಒಪ್ಪಿಗೆ ನೀಡಬೇಕು. ರಾಷ್ಟ್ರಪತಿಗಳಿಲ್ಲದೇ ಸಂಸತ್ತು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೂ ಅವರು ಇಲ್ಲದೆ ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿ ನಿರ್ಧರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.