ಪೊಲೀಸ್ ಅಧಿಕಾರಿಯ ಮನೆಯಲ್ಲಿ ಕಳ್ಳತನ ನಡೆಸಿದ ಕಳ್ಳನೊಬ್ಬ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಪತ್ರದಲ್ಲಿ ಕಳ್ಳ, ಕ್ಷಮಿಸು ಗೆಳೆಯ, ನನಗೆ ಬೇರೆ ದಾರಿ ಇರಲಿಲ್ಲ. ಗೆಳೆಯನ ಜೀವ ಕಾಪಾಡಲು ಈ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ ಈ ಕದ್ದ ಹಣವನ್ನ ಶೀಘ್ರದಲ್ಲೇ ಹಿಂದಿರುಗಿಸುತ್ತೇನೆ ಎಂದು ಬರೆದಿದ್ದಾರೆ.
ಚತ್ತೀಸಗಢದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಘಟನೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯ ಮನೆಯವರು ಭಿಂದ್ ನಗರಕ್ಕೆ ತೆರಳಿದ್ದರು.
ನಾನು ಈ ಕೆಲಸ ಮಾಡದೇ ಹೋಗಿದ್ದರೆ ನನ್ನ ಗೆಳೆಯ ಜೀವ ಕಳೆದುಕೊಳ್ಳುತ್ತಿದ್ದ. ನೀವು ಹೆದರಬೇಡಿ. ನನ್ನ ಕೈಗೆ ಹಣ ಸಿಗುತ್ತಿದ್ದಂತೆಯೇ ಶೀಘ್ರದಲ್ಲೇ ಈ ಕದ್ದ ಹಣವನ್ನ ಹಿಂದಿರುಗಿಸುವೆ ಎಂದು ಪತ್ರದಲ್ಲಿ ಬರೆದಿದ್ದಾನೆ.
ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಮಕ್ಕಳು ಜೂನ್ 30ರಂದು ಸಂಬಂಧಿಗಳ ಮನೆಗೆ ತೆರಳಿದ್ದರು. ಸೋಮವಾರ ರಾತ್ರಿ ಮನೆಗೆ ಹಿಂದಿರುಗಿದ ವೇಳೆಯಲ್ಲಿ ಮನೆಯಲ್ಲಿ ಕಳ್ಳತನ ನಡೆದಿರೋದು ಗಮನಕ್ಕೆ ಬಂದಿದೆ.
ಆದರೆ ಕಳ್ಳ ಈ ಕ್ಷಮಾಪಣ ಪತ್ರವನ್ನ ಬರೆದಿಟ್ಟಿರೋದನ್ನ ನೋಡಿದ್ರೆ ಈ ಕುಟುಂಬಕ್ಕೆ ಪರಿಚಯ ಇರುವ ಯಾರೋ ಈ ಕೃತ್ಯ ನಡೆಸಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.