ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ನಟ ಸೂರಜ್ ಪಾಂಚೋಲಿ ಟೆಂಪಲ್ ರನ್ ಮಾಡಿದ್ದಾರೆ. 10 ವರ್ಷಗಳ ನಂತರ ಪ್ರಕರಣದಿಂದ ಮುಕ್ತಿ ಸಿಕ್ಕಿದ್ರಿಂದ ಮುಂಬೈ ಸಿದ್ಧಿವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಜಿಯಾ ಖಾನ್ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ ಅವರನ್ನು ಶುಕ್ರವಾರ ಖುಲಾಸೆಗೊಳಿಸಿದೆ.
ನಟಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಸೂರಜ್ ಪಾಂಚೋಲಿ ಮೇಲಿತ್ತು. ಸಾಕ್ಷಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿಯನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ಆದ್ದರಿಂದ ಖುಲಾಸೆಗೊಳಿಸಲಾಗಿದೆ ಎಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್. ಸಯ್ಯದ್ ಹೇಳಿದರು.
ಅಮಿತಾಭ್ ಬಚ್ಚನ್ ಜೊತೆ ನಿಶಬ್ದ್ ಚಿತ್ರದಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ಜಿಯಾಖಾನ್ , ಜೂನ್ 3, 2013 ರಂದು ಮುಂಬೈನ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 25 ವರ್ಷದ ಮೃತ ನಟಿ ಜಿಯಾಖಾನ್ ಬರೆದಿದ್ದಾರೆ ಎನ್ನಲಾದ ಆರು ಪುಟಗಳ ಪತ್ರದ ಆಧಾರದಲ್ಲಿ ಆಕೆಯ ಅಂದಿನ ಗೆಳೆಯ ಸೂರಜ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿತ್ತು. 10 ವರ್ಷಗಳ ನಂತರ ನಟನನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ.