ಜೊಮ್ಯಾಟೋ ಹಾಗೂ ಸ್ವಿಗ್ಗಿಯಂತಹ ಆಹಾರ ವಿತರಣಾ ಅಪ್ಲಿಕೇಶನ್ ಗಳನ್ನೂ ಸರಕು ಹಾಗೂ ಸೇವಾ ತೆರಿಗೆ ಮಂಡಳಿಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಪರಿಣಾಮವಾಗಿ ಇನ್ಮುಂದೆ ಡೆಲಿವರಿ ಅಪ್ಲಿಕೇಶನ್ ಗಳಲ್ಲಿ ಫುಡ್ ಆರ್ಡರ್ ಮಾಡಿದಾಗ ಜಿ.ಎಸ್.ಟಿ. ಬೀಳಲಿದೆ ಎನ್ನಲಾಗಿದೆ.
ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಆಹಾರ ವಿತರಣಾ ಅಪ್ಲಿಕೇಶನ್ ಗಳನ್ನು ರೆಸ್ಟೋರೆಂಟ್ ಸೇವೆಗಳ ಅಡಿಯಲ್ಲೇ ತರಲು ಪ್ಲಾನ್ ಮಾಡಲಾಗಿದೆ. ಈ ಮೂಲಕ ಫುಡ್ ಡೆಲಿವರಿ ಸೇವೆಗಳ ಮೇಲೂ ಜಿ.ಎಸ್.ಟಿ. ವಿಧಿಸುವ ಸಾಧ್ಯತೆ ಇದೆ.
ಶುಕ್ರವಾರದ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತೆರಿಗೆ ದರ ಬದಲಾವಣೆಗಳ ಕುರಿತು ಸಲಹೆ ನೀಡುವ ವಿವಿಧ ರಾಜ್ಯದ ಅಧಿಕಾರಿಗಳನ್ನು ಒಳಗೊಂಡ ಫಿಟ್ಮೆಂಟ್ ಸಮಿತಿಯು ರೆಸ್ಟೋರೆಂಟ್ ಸೇವೆಗಳನ್ನು ಜನತೆಗೆ ಸರಬರಾಜು ಮಾಡುವ ಇ ಕಾಮರ್ಸ್ ಆಪರೇಟರ್ಗಳನ್ನೂ ರೆಸ್ಟೋರೆಂಟ್ ಸೇವೆಗಳ ವ್ಯಾಪ್ತಿಗೆ ತರುವಂತೆ ಸಲಹೆ ನೀಡಿದೆ. ಒಂದು ವೇಳೆ ಈ ಸಲಹೆಯು ಕಾರ್ಯರೂಪಕ್ಕೆ ಬಂದಲ್ಲಿ ಸ್ವಿಗ್ಗಿ, ಜೊಮ್ಯಾಟೋದಂತಹ ಅಪ್ಲಿಕೇಶನ್ ಗಳೂ ಸಹ ಜಿ.ಎಸ್.ಟಿ. ಪಾವತಿ ವ್ಯಾಪ್ತಿಯಲ್ಲಿಯೇ ಬರಲಿದೆ. ಈ ಮೂಲಕ ಆಹಾರ ಪ್ರಿಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.