ದಾವಣಗೆರೆ: ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಎನ್.ಡಿ.ಆರ್.ಎಫ್. ಮಾನದಂಡದಡಿ 13 ಸಾವಿರ ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನವೆಂಬರ್ ಅಂತ್ಯದೊಳಗೆ ಅನುಮೋದನೆ ನಿರೀಕ್ಷಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಫ್ರೂಟ್ಸ್ ತತ್ರಾಂಶದ ಮೂಲಕ ನೇರವಾಗಿ ರೈತರಿಗೆ ಬರ ಪರಿಹಾರವನ್ನು ನೀಡಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವನಾರಾಯಣಸ್ವಾಮಿ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಕೃಷಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ವೇಳೆ ಮಾತನಾಡಿದರು.
ಬೆಳೆ ಪರಿಹಾರ ವಿತರಣೆಗೆ ಶೇ 75 ರಷ್ಟು ನೊಂದಣಿಯಾಗಿ ಸಿದ್ದತೆಯನ್ನು ಪೂರ್ಣಗೊಳಿಸಲಾಗಿದೆ. ಮತ್ತು ಶೇ 95 ರಷ್ಟು ಬೆಳೆ ಸಮೀಕ್ಷೆ ಮಾಡಿದ್ದು, ಇ -ಕೆವೈಸಿ ಶೇ. 90 ರಷ್ಟು ಪೂರ್ಣಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವರು ನವೆಂಬರ್ 23 ರಂದು ಭೇಟಿಗೆ ಸಮಯ ನೀಡಿದ್ದು ಕಂದಾಯ ಸಚಿವರೊಂದಿಗೆ ಭೇಟಿ ಮಾಡಲಾಗುತ್ತಿದೆ ಎಂದರು.
ಕೃಷಿಭಾಗ್ಯ ಮರು ಜಾರಿ;
2013 ರಿಂದ 2018 ರ ವರೆಗೆ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ನಂತರ ಈ ಯೋಜನೆ ಸ್ಥಗಿತವಾಗಿದ್ದು ಮರುಚಾಲನೆ ನೀಡಲಾಗಿದೆ. ಈ ವರ್ಷ 30 ಸಾವಿರ ಕೃಷಿಹೊಂಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ರಾಷ್ಟ್ರೀಯ ವಿಪತ್ತು ನಿಧಿಯಡಿ 100 ಕೋಟಿಯನ್ನು ಇದಕ್ಕಾಗಿ ಒದಗಿಸಲಾಗುತ್ತಿದೆ ಎಂದರು.
ಎನ್.ಡಿ.ಆರ್.ಎಫ್ ಮಾನದಂಡದಡಿ 18 ಸಾವಿರ ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ರೈತರಿಗೆ ನೇರವಾಗಿ ನೀಡುವ ಪರಿಹಾರ 13 ಸಾವಿರ ಕೋಟಿಯಾಗಿದೆ. ಇದಲ್ಲದೇ 9 ಸಾವಿರ ಕೋಟಿ ಕುಡಿಯುವ ನೀರು, ಮೇವಿಗಾಗಿ ಪ್ರಸ್ತಾವಿಸಲಾಗಿದೆ. ರೈತರಿಗೆ ನೀಡುವ ಪರಿಹಾರವನ್ನು ಫ್ರೂಟ್ಸ್ ಐಡಿ ಮೂಲಕವೇ ಪಾವತಿಸಲಾಗುತ್ತಿದ್ದು ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ ಎಂದರು.
ಹಾರ್ವೇಸ್ಟಿಂಗ್ ಹಬ್;
ರಾಜ್ಯದಲ್ಲಿ ಹೊಸದಾಗಿ 100 ಕಡೆ ಕಬ್ಬು ಮತ್ತು ಭತ್ತದ ಹಾರ್ವೆಸ್ಟಿಂಗ್ ಹಬ್‍ಗಳನ್ನು ಡಿಸೆಂಬರ್ ಒಳಗಾಗಿ ಪ್ರಾರಂಭಿಸಲಾಗುತ್ತಿದೆ. ಇದರಿಂದ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವುದರ ಜೊತೆಗೆ ಸಮಯ, ಗುಣಮಟ್ಟ ಕಾಪಾಡಲು ಅನುಕೂಲವಾಗಲಿದೆ ಎಂದರು.
ಕನಿಷ್ಠ ಅವಧಿ
ನಿರ್ವಹಣೆ ತಳಿಗಳ ಸಂಶೋಧನೆಗೆ ಒತ್ತು; ಭತ್ತ, ಮೆಕ್ಕೆಜೋಳ, ರಾಗಿ ಹಾಗೂ ಇನ್ನಿತರೆ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ತೇವಾಂಶ, ನೀರು ಬಳಕೆ ಮತ್ತು ಕನಿಷ್ಠ ನಿರ್ವಹಣೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಬರಗಾಲದಲ್ಲಿಯೂ ಮಿತ ನೀರಿನ ಬಳಕೆ ಮೂಲಕ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಲು ಸಂಶೋಧನೆ ಕೈಗೊಳ್ಳಲು ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳ ಸೇವೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೃಷಿ ವಿಜ್ಞಾನಿಗಳನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದರು.