ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಶೀಘ್ರದಲ್ಲಿಯೇ ಆಫ್ಲೈನ್ ಪೇಮೆಂಟ್ ತಂತ್ರಜ್ಞಾನ ಇಡೀ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಆರ್.ಬಿ.ಐ. ಹೇಳಿದೆ.
ಇಂಟರ್ನೆಟ್ ಸಂಪರ್ಕ ಕಡಿಮೆಯಿರುವ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಜನರು ಕೂಡ ಇದ್ರಿಂದ ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು. ಆಗಸ್ಟ್ 6, 2020 ರಂದು, ನವೀನ ತಂತ್ರಜ್ಞಾನದ ಪ್ರಾಯೋಗಿಕ ಪ್ರಯೋಗಗಳನ್ನು ನಡೆಸುವ ಯೋಜನೆಯನ್ನು ಆರ್.ಬಿ.ಐ. ಘೋಷಿಸಿತ್ತು. ಅದು ಇಂಟರ್ನೆಟ್ ಸಂಪರ್ಕ ಲಭ್ಯವಿಲ್ಲದ ಸಂದರ್ಭಗಳಲ್ಲಿ ಆಫ್ಲೈನ್ ಮೂಡ್ ನಲ್ಲಿ ಡಿಜಿಟಲ್ ಪಾವತಿ ಪ್ರಾಯೋಗಿಕ ಪ್ರಯೋಗವನ್ನು ಒಳಗೊಂಡಿತ್ತು.
ಪ್ರಾಯೋಗಿಕ ಯೋಜನೆಯಡಿ, ಸೆಪ್ಟೆಂಬರ್ 2020 ರಿಂದ ಜೂನ್ 2021 ರವರೆಗಿನ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರಯೋಗ ಯಶಸ್ವಿಯಾಗಿದೆ. ಇದ್ರಲ್ಲಿ ಪಡೆದ ಅನುಭವ ಮತ್ತು ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಗಣನೆಗೆ ತೆಗೆದುಕೊಂಡು, ಆರ್.ಬಿ.ಐ. ಈಗ ದೇಶಾದ್ಯಂತ ಆಫ್‌ಲೈನ್ ಮೋಡ್‌ನಲ್ಲಿ ಚಿಲ್ಲರೆ ಡಿಜಿಟಲ್ ಪಾವತಿ ತಂತ್ರಜ್ಞಾನ ಜಾರಿಗೆ ತರಲು ಮುಂದಾಗಿದೆ. ಇದ್ರ ಬಗ್ಗೆ ಶೀಘ್ರದಲ್ಲಿಯೇ ಮಾರ್ಗಸೂಚಿ ಹೊರಬರಲಿದೆ.
ಪ್ರಾಯೋಗಿಕ ಯೋಜನೆಯಡಿ, ಬ್ಯಾಂಕುಗಳು ಮತ್ತು ಬ್ಯಾಂಕೇತರರು ಆಫ್‌ಲೈನ್ ಡಿಜಿಟಲ್ ಪಾವತಿ ನೀಡಬಹುದು. ಇಂಟರ್ನೆಟ್ ಸಂಪರ್ಕದ ಕೊರತೆ ಅಥವಾ ಅನಿಯಮಿತತೆ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ, ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಪ್ರಮುಖ ಅಡಚಣೆಯಾಗಿದೆ ಎಂದು ಆರ್.ಬಿ.ಐ. ಹೇಳಿದೆ. ಆಫ್ಲೈನ್ ಪಾವತಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕಂಪನಿಗಳನ್ನು ಪ್ರೋತ್ಸಾಹಿಸಲಾಗ್ತಿದೆ.