
ಉಡುಪಿ: ಕೆಲ ವರ್ಷಗಳಿಂದ ಕೆಲಸಕ್ಕಾಗಿ ವಿದೇಶದಲ್ಲಿದ್ದ ಮಗ ಊರಿಗೆ ಬರುವ ಸುಳಿವೂ ನೀಡದೇ ದಿಢೀರ್ ಆಗಿ ಪ್ರತ್ಯಕ್ಷನಾದರೇ ಹೆತ್ತ ತಾಯಿಗೆ ಆಗುವ ಸಂತಸ, ಖುಷಿಗೆ ಪಾರವೇ ಇರದು… ಇಂತದ್ದೊಂದು ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕುಂದಾಪುರದ ರೋಹಿತ್ ಎಂಬಾತ ಮೂರು ವರ್ಷಗಳ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಸರ್ಪ್ರೈಸ್ ನೀಡಿದ್ದಾನೆ. ಮಗನ ಆಗಮನದ ಸುಳಿವೂ ಇರದ ತಾಯಿ ಎಂದಿನಂತೆ ತನ್ನ ಕೆಲಸದಲ್ಲಿ ನಿರತಳಾಗಿದ್ದರು… ಮಾರ್ಕೆಟ್ ನಲ್ಲಿ ಫಿಶ್ ಮಾರುತ್ತಾ ಜೀವನ ಸಾಗಿಸುತ್ತಿದ್ದರು. ದುಬೈನಿಂದ ನೇರವಾಗಿ ಬಂದ ಮಗ ರೋಹಿತ್, ಮುಖಕ್ಕೆ ಕರವಸ್ತ್ರಕಟ್ಟಿಕೊಂಡು ಅಮ್ಮನ ಬಳಿ ಗ್ರಾಹಕನಂತೆ ಫಿಶ್ ಖರೀದಿಸಲು ಮುಂದಾಗಿದ್ದಾನೆ. ಗ್ರಾಹಕನಂತೆ ಮಾತನಾಡುತ್ತಲೇ ಮುಖದಿಂದ ಕರವಸ್ತ್ರ ತೆಗೆದು ಅಮ್ಮನಿಗೆ ಅಚ್ಚರಿ ಮೂಡಿಸಿದ್ದಾನೆ.
ದುಬೈನಲ್ಲಿದ್ದ ಮಗ ಕಣ್ಮುಂದೆ ಪ್ರತ್ಯಕ್ಷವಾಗಿರುವುದನ್ನು ಕಂಡು ಅಮ್ಮನ ಕಣ್ಣಂಚಲ್ಲಿ ಆನಂದ ಭಾಷ್ಪ… ಮೂರು ವರ್ಷಗಳ ಬಳಿಕ ತಾಯಿಯನ್ನು ನೋಡಿದ ಮಗನೂ ಅರೇಕ್ಷಣ ಭಾವುಕನಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಹೃದಯ ಸ್ಪರ್ಶಿಯಾಗಿದೆ.