ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್, ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ನಡೆಸಿದೆ ಎನ್ನಲಾದ ಕೆಲವು ಲೋಪಗಳನ್ನು ಪಟ್ಟಿ ಮಾಡಿ ಅದರ ವರದಿ ಬಿಡುಗಡೆ ಮಾಡಿದ ಬಳಿಕ ಆ ಕಂಪನಿಯ ಷೇರುಗಳ ಮೌಲ್ಯದಲ್ಲಿ ಭಾರಿ ಇಳಿಕೆಯಾಗಿದೆ.
ಇದರ ಮಧ್ಯೆ ಸುಪ್ರೀಂ ಕೋರ್ಟ್ ಗುರುವಾರದಂದು ಆದೇಶವೊಂದನ್ನು ಹೊರಡಿಸಿದ್ದು, ಅದಾನಿ – ಹಿಂಡನ್ ಬರ್ಗ್ ವಿಚಾರ ಕುರಿತಂತೆ ‘ಸೆಬಿ’ ಸಮಗ್ರ ತನಿಖೆ ನಡೆಸಬೇಕೆಂದು ನಿರ್ದೇಶಿಸಿದೆ. ಅಲ್ಲದೆ 6 ಮಂದಿಯ ಸಮಿತಿಯೊಂದನ್ನು ರಚಿಸಲಾಗಿದೆ.
ಈ ತೀರ್ಪನ್ನು ಸ್ವಾಗತಿಸಿರುವ ತೃಣ ಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಹಿತ್ರಾ, ಆದರೆ ಸೆಬಿಯಲ್ಲಿ ಗೌತಮ್ ಅದಾನಿ ಅವರ ಪುತ್ರ ಕರಣ್ ಅದಾನಿ ಪತ್ನಿ ಪರಿಧಿ ಅದಾನಿಯವರ ತಂದೆ ಇರುವುದರ ಕುರಿತು ಗಮನ ಸೆಳೆದಿದ್ದಾರೆ. ಪರಿಧಿ ಅದಾನಿಯವರ ತಂದೆ ಸೈರಿಲ್ ಶ್ರಾಫ್ ಸೆಬಿಯ ಉನ್ನತ ಕಮಿಟಿಯಲ್ಲಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಅದರಿಂದ ಹೊರ ಬರಬೇಕೆಂದು ಆಗ್ರಹಿಸಿದ್ದಾರೆ.