
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಬಿಹಾರದಲ್ಲಿನ ಸೋಲು, ಪಕ್ಷದ ಸಂಘಟನೆ, ಜಮ್ಮು ಮತ್ತು ಕಾಶ್ಮೀರದ ಗುಪ್ಕರ್ ಒಕ್ಕೂಟ ಮೊದಲಾದ ವಿಷಯಗಳ ಕುರಿತಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ವರ್ಚುಯಲ್ ಸಭೆಯಲ್ಲಿ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
ಕಪಿಲ್ ಸಿಬಲ್ ಪಕ್ಷದ ಆಂತರಿಕ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಸ್ತಾಪಿಸಿರುವ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ಸಂದರ್ಭದಲ್ಲಿ ಹಿರಿಯ ನಾಯಕರು ಸಭೆ ನಡೆಸಲಿದ್ದಾರೆ. ಕಪಿಲ್ ಸಿಬಲ್ ಹೇಳಿಕೆ ಬಗ್ಗೆ ಚರ್ಚೆ ನಡೆಯಲಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬಹುದೆಂದು ಹೇಳಲಾಗಿದೆ.