ನವದೆಹಲಿ: ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಲು ನಿರ್ಧರಿಸಿದ ದಿನ ಸೋನಿಯಾ ಗಾಂಧಿ ಅವರು ಪ್ರಧಾನಿ ಭವನದಲ್ಲಿ ಹಾಜರಿದ್ದರು ಎಂದು ಮಧ್ಯಪ್ರದೇಶದ ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಂತರಿಕ ಭದ್ರತಾ ಕಾಯಿದೆ(ಮಿಸಾ) ಕಾಯಿದೆಯಡಿ ಜೈಲಿನಲ್ಲಿದ್ದವರನ್ನು ಸನ್ಮಾನಿಸಲು ಮಧ್ಯಪ್ರದೇಶ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಸತ್ತಿನ ಆವರಣದಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮತ್ತು ‘ಇಂಡಿಯಾ’ ಬಣವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಅವರು, 1975 ರಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸೋನಿಯಾ ಗಾಂಧಿ ಅವರು ಪ್ರಧಾನಿ ಸದನದಲ್ಲಿ ಇದ್ದರು ಎಂದು ಹೇಳಿದ್ದಾರೆ.
ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಲು ನಿರ್ಧರಿಸಿದ ದಿನ ಸೋನಿಯಾ ಗಾಂಧಿ ಅವರು ಪ್ರಧಾನಿ ಭವನದಲ್ಲಿ ಹಾಜರಿದ್ದರು. ಇಂದು ಅವರು ತಮ್ಮ ಮಗ(ರಾಹುಲ್ ಗಾಂಧಿ) ಜೊತೆಗೆ ಸಂವಿಧಾನದ ಪ್ರತಿಯನ್ನು ಹಿಡಿದಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖವಾಗಿದೆ ಎಂದು ಹೇಳಿದ್ದಾರೆ.
ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂವಿಧಾನವನ್ನು 100 ಬಾರಿ ತಿದ್ದುಪಡಿ ಮಾಡಲಾಗಿದ್ದು, ಈಗ ಅವರು ನಕಲಿ ಹಕ್ಕುಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ನಾಯಕರು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರೆಲ್ಲರೂ ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನು ರಕ್ಷಿಸುತ್ತಿದ್ದಾರೆ ಎಂಬುದು ಸತ್ಯ ಎಂದು ನರೋತ್ತಮ್ ಮಿಶ್ರಾ ಅವರು ಟೀಕಿಸಿದ್ದಾರೆ.
ಕರಾಳ ದಿನವನ್ನು ನೋಡದವರಿಗೆ ತುರ್ತು ಪರಿಸ್ಥಿತಿಯ ಸತ್ಯವನ್ನು ತಿಳಿಸಲು ಬಿಜೆಪಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.