ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಉತ್ತರಪ್ರದೇಶದಲ್ಲಿ ಎರಡು ಹಂತಗಳ ಮತದಾನ ಮುಗಿದಿದೆ. ಗೋವಾ, ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಪೂರ್ಣ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಉಳಿದಿರುವುದು ಪಂಜಾಬ್ ಮತ್ತು ಮಣಿಪುರದ ಜತೆಗೆ ಉ.ಪ್ರ.ದಲ್ಲಿ ಐದು ಹಂತಗಳ ಮತದಾನ ಮಾತ್ರವೇ.
ಈ ಪೈಕಿ ಮಣಿಪುರ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಪ್ರಚಾರ ಅಭಿಯಾನ ಆರಂಭಿಸಿದ್ದು, ತಾರಾ ಪ್ರಚಾರಕರ ಪಟ್ಟಿಯಲ್ಲಿ ಇದುವರೆಗೂ ಚುನಾವಣೆ ಕಡೆಗೆ ಗಮನಹರಿಸದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿದೆ.
’ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದ ಎಂಜಿನಿಯರಿಂಗ್ ವಿದ್ಯಾರ್ಥಿ….!
ಎಐಸಿಸಿ ಮಧ್ಯಂತರ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರು ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡದ ಸಾರ್ವಜನಿಕ ರ್ಯಾಲಿಗಳಲ್ಲಿ ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧದ ಪ್ರಖರ ವಾಗ್ದಾಳಿ ಭಾಷಣಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಪ್ರಖರ ಭಾಷಣಗಳನ್ನೂ ಕೂಡ ಮಾಡಿಲ್ಲ. ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಾತ್ರವೇ ಮುಂದೆ ಬಿಟ್ಟಿದ್ದಾರೆ.
ಉಳಿದಂತೆ ಹಿರಿಯ ಕಾಂಗ್ರೆಸ್ಸಿಗರು ಸೋನಿಯಾ ಅವರ ಪಕ್ಷದಲ್ಲಿನ ಆಡಳಿತ ವೈಖರಿಯನ್ನು ಖಂಡಿಸಿ, ಬಹಿರಂಗವಾಗಿ ಅಸಮಾಧಾನ ಹೊರಹಾಕಿಕೊಂಡು ಜಿ-23 ಎಂಬ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರುಗಳು ಪಕ್ಷದ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.
ಹಾಗಾಗಿ ಮಣಿಪುರ ಚುನಾವಣೆಗಾಗಿ ಬಿಡುಗಡೆಯಾಗಿರುವ ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿಯು ವಿಶೇಷ ಗಮನ ಸೆಳೆದಿದೆ. ಸೋನಿಯಾ ಗಾಂಧಿ, ಮಣಿಪುರ ಮಾಜಿ ಸಿಎಂ ಒಕ್ರಮ್ ಐಬೊಬಿ ಸಿಂಗ್, ಜೆಎನ್‌ಯು ಗಲಾಟೆಯಿಂದ ದೇಶದ ಗಮನ ಸೆಳೆದು ಬಿಹಾರದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಕನ್ಹಯ್ಯಾ ಕುಮಾರ್, ಹಿರಿಯ ಕಾಂಗ್ರೆಸ್ಸಿಗ ಜೈರಾಮ್ ರಮೇಶ್ ಹೆಸರುಗಳು ಪಟ್ಟಿಯಲ್ಲಿ ಗಮನಾರ್ಹವಾಗಿವೆ.
ಉಳಿದಂತೆ ಸ್ಥಳೀಯರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಕೂಡ ತಾರಾ ಪ್ರಚಾರದ ಪಟ್ಟಿಯಲ್ಲಿದ್ದು , ಪ್ರಿಯಾಂಕಾ ಅವರನ್ನು ಮಾತ್ರ ಉತ್ತರಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ.