ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 1.15 ಕೋಟಿ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದ್ದು, 1.5 ಕೋಟಿ ಜನರಿಂದ ಗಾಯನಸುಧೆ ಹರಿಯಲಿದೆ. ದೇಶ ವಿದೇಶಗಳಿಂದಲೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನ್ನಡಿಗರು ಉತ್ಸಾಹ ತೋರಿದ್ದಾರೆ.
ಕಾರ್ಯಕ್ರಮಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತ್ಯೇಕ ಕ್ಯೂಆರ್ ಕೋಡ್ ಆರಂಭಿಸಿದ್ದು, ಇದರಲ್ಲಿ 29 ರಾಜ್ಯಗಳು ಹಾಗೂ 42 ದೇಶಗಳಿಂದ ಕನ್ನಡ ಪ್ರೇಮಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹಲವು ಕಡೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧಾನಸೌಧದ ಮೆಟ್ಟಿಲು, ಗಾಂಧಿ ಪ್ರತಿಮೆ, ಹೈಕೋರ್ಟ್, ಕಂಠೀರವ ಸ್ಟೇಡಿಯಂ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಕಡಲ ತೀರಗಳು ಮೊದಲಾದ ಕಡೆಗಳಲ್ಲಿ ಕನ್ನಡ ಗೀತೆಗಳು ಮೊಳಗಲಿವೆ.
ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’, ಹುಯಿಲಗೋಳ ನಾರಾಯಣರಾವ್ ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಚೆನ್ನವೀರ ಕಣವಿಯವರ ‘ವಿಶ್ವ ವಿನೂತನ ವಿದ್ಯಾ ಚೇತನ’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ,’ ಡಿ.ಎಸ್. ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಗುವುದು.