ಬೆಂಗಳೂರು: ಕಾಫಿ ಎಸ್ಟೇಟ್ ದಾನವಾಗಿ ಪಡೆದ ಬಳಿಕ ತಾಯಿಯ ಜೀವನ ನಿರ್ವಹಣೆ ನಿರ್ಲಕ್ಷಿಸಿದ ಪುತ್ರನಿಗೆ ಹೈಕೋರ್ಟ್ ಚಾಟಿ ಬೀಸಿದ್ದು, ತಾಯಿಯ ಜೀವನ ನಿರ್ವಹಣೆಗೆ ಹಣ ನೀಡುವಂತೆ ಆದೇಶಿಸಿದೆ.
85 ವರ್ಷದ ವೃದ್ದ ತಾಯಿಯ ಜೀವನ ನಿರ್ವಹಣೆಗಾಗಿ ವಾರ್ಷಿಕ ತಲಾ 7 ಲಕ್ಷ ರೂಪಾಯಿ ಪಾವತಿಸಲು ಆಕೆಯ ಪುತ್ರನಿಗೆ ನಿರ್ದೇಶಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗಿಯ ಪೀಠ ಪುರಸ್ಕರಿಸಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಪ್ಪ ರಂಡ ಶಾಂತಿ ಬೋಪಣ್ಣ ಅವರ ಪುತ್ರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ಪೀಠದಿಂದ ಈ ಆದೇಶ ನೀಡಲಾಗಿದೆ.
ಹೈಕೋರ್ಟ್ ಏಕ ಸದಸ್ಯ ಪೀಠದಿಂದ ತಾಯಿ ಅಪ್ಪರಂಡ ಶಾಂತಿ ಬೋಪಣ್ಣ ಅವರ ಜೀವನಾಂಶಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಮತ್ತು ಮೊಮ್ಮಗಳು ವರ್ಷಕ್ಕೆ ತಲಾ 7 ಲಕ್ಷ ರೂ, ಆದೇಶ ನೀಡಿದ್ದು, ಈ ಆದೇಶದಲ್ಲಿ ಮಧ್ಯ ಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಹೆರೂರು ಎಸ್ಟೇಟ್ ವಾಸಿಯಾದ ಅಪ ರಂಡ ಶಾಂತಿ ಬೋಪಣ್ಣ ತಮಗೆ ಸೇರಿದ 22 ಎಕರೆ ಕಾಫಿ ಎಸ್ಟೇಟ್ ಅನ್ನು ತಮ್ಮ ಪುತ್ರ ಮತ್ತು ಮೊಮ್ಮಗಳಿಗೆ 2016ರಲ್ಲಿ ದಾನ ಪತ್ರ ರೂಪದಲ್ಲಿ ನೀಡಿದ್ದು, ಜೀವನ ನಿರ್ವಹಣೆಗೆ ವಾರ್ಷಿಕ ತಲಾ 7 ಲಕ್ಷ ರೂ. ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಇಬ್ಬರು ತಿಳಿಸಿದ್ದರು. 2019ರ ವರೆಗೆ ಹಣ ಪಾವತಿಸಿದ್ದು, ನಂತರ ನೀಡಿರಲಿಲ್ಲ.
ಆ ಆಸ್ತಿಯನ್ನು ಮಾರಲು ಅವರು ಯತ್ನಿಸುತ್ತಿರುವ ವಿಷಯ ತಿಳಿದ ಶಾಂತಿ ಬೋಪಣ್ಣ ಮಡಿಕೇರಿ ಉಪ ವಿಭಾಗಾಧಿಕಾರಿಗೆ ಮನವಿ ಮಾಡಿದ್ದು, ದಾನ ಪತ್ರ ರದ್ದುಪಡಿಸಲಾಗಿತ್ತು. ಜಿಲ್ಲಾಧಿಕಾರಿ ಆದೇಶವನ್ನು ರದ್ದು ಮಾಡಿದ್ದು, ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಎಸ ಸದಸ್ಯ ಪೀಠ ವಿಚಾರಣೆ ನಡೆಸಿ ಶಾಂತಿ ಬೋಪಣ್ಣ ಅವರಿಗೆ ವಾರ್ಷಿಕ 7 ಲಕ್ಷ ರೂ. ಪಾವತಿಸುವಂತೆ ಪುತ್ರ ಮತ್ತು ಮೊಮ್ಮಗಳಿಗೆ ನಿರ್ದೇಶನ ನೀಡಿತ್ತು. ಅದನ್ನು ಪ್ರಶ್ನಿಸಿ ಪುತ್ರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.