
ಬೆಂಗಳೂರು: ಅತ್ತೆ ಮನೆಯಲ್ಲಿ ಕಳ್ಳತನ ಮಾಡಿದ್ದ ಅಳಿಯನನ್ನು ರಾಜಗೋಪಾಲನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ಪರಶುರಾಮ(29) ಬಂಧಿತ ಆರೋಪಿಯಾಗಿದ್ದು, ಆತನಿಂದ 3.80 ಲಕ್ಷ ರೂಪಾಯಿ ಮೌಲ್ಯದ 70 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಜುಲೈ 2ರಂದು ಲಗ್ಗೆರೆ ರಾಜೀವ್ ಗಾಂಧಿನಗರದಲ್ಲಿ ಸುವರ್ಣಮ್ಮ ಹುಟ್ಟುಹಬ್ಬ ಹಿನ್ನೆಲೆ ಹಿರಿಯ ಪುತ್ರಿ ರೇಣುಕಾ ಮತ್ತು ಅಳಿಯ ಪರಶುರಾಮ ಮನೆಗೆ ಆಗಮಿಸಿದ್ದಾರೆ.
ಬೆಳಗ್ಗೆ 10:45ಕ್ಕೆ ದೇವಸ್ಥಾನಕ್ಕೆ ತೆರಳುವಾಗ ಸುವರ್ಣಮ್ಮ ಮನೆಗೆ ಬೀಗ ಹಾಕಿ ರೇಣುಕಾ ಅವರ ಬಳಿ ಕೀ ಕೊಟ್ಟಿದ್ದಾರೆ. ಪತ್ನಿಗೆ ಗೊತ್ತಾಗದಂತೆ ಕೀ ತೆಗೆದುಕೊಂಡಿದ್ದ ಪರಶುರಾಮ, ಅತ್ತೆ ಮತ್ತು ಪತ್ನಿ ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಕಳ್ಳತನ ಮಾಡಿ ಬಳಿಕ ಕೀ ಅನ್ನು ಮತ್ತೆ ಪತ್ನಿಯ ಬ್ಯಾಗ್ ನಲ್ಲಿ ಇಟ್ಟಿದ್ದಾನೆ. ಮಧ್ಯಾಹ್ನ ಮನೆಗೆ ಬಂದ ಸುವರ್ಣಮ್ಮ ಬೀರು ತೆಗೆದು ನೋಡಿದಾಗ ಚಿನ್ನಾಭರಣ ಕಾಣಿಸಿಲ್ಲ. ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿದ ವೇಳೆ ಪರಶುರಾಮ ಕಳವು ಮಾಡಿ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.