
ಮಕ್ಕಳಿಗೆ ತಂದೆ ತಾಯಿ ಕೇಳಿದ್ದನ್ನೆಲ್ಲಾ ಕೊಡಿಸ್ತಾರೆ. ಅವರ ಆಸೆ – ಕನಸು ಏನು ಅನ್ನೋದನ್ನ ತಿಳ್ಕೊಂಡು ಅದನ್ನ ಪೂರೈಸಲು ಪ್ರಯತ್ನಿಸ್ತಾರೆ. ಆದ್ರೆ ತಂದೆ- ತಾಯಿಯ ಆಸೆ, ಕನಸನ್ನ ಮಕ್ಕಳು ಅರ್ಥ ಮಾಡ್ಕೊಂಡು ಅವರಿಗೆ ಇಷ್ಟವಾದುದನ್ನ ಕೊಡಿಸೋದು ತುಂಬಾ ಅಪರೂಪ.
ಅಂತಹ ಅಪರೂಪದ ಘಟನೆಗಳಿಗೆ ಮತ್ತೊಂದು ಪ್ರಸಂಗ ಸೇರಿದೆ. ತನ್ನ ತಂದೆಯ 59 ನೇ ವರ್ಷದ ಹುಟ್ಟುಹಬ್ಬಕ್ಕೆ ಮಗ ಅವರ ಅಪ್ಪ ತುಂಬಾ ಪ್ರೀತಿಸುತ್ತಿದ್ದ ಬೈಕ್ ನ ಗಿಫ್ಟ್ ಆಗಿ ಕೊಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮನಮುಟ್ಟಿದೆ.
ಉಜ್ವಲ್ ಎಂಬುವವರು ತನ್ನ ತಂದೆಯ 59 ನೇ ಹುಟ್ಟುಹಬ್ಬಕ್ಕೆ ಬೈಕ್ ಗಿಫ್ಟ್ ಮಾಡಿದ್ದರು. ಗಿಫ್ಟ್ ಬಾಕ್ಸ್ ಓಪನ್ ಮಾಡಿದ ಅವರ ತಂದೆ ಬೈಕ್ ನೋಡಿದ ತಕ್ಷಣ ಖುಷಿಯಿಂದ ಹೊರಗೆ ಹೋಗಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹತ್ತಿ ಪೋಸ್ ನೀಡಿದರು. ತಮ್ಮ ಕನಸಿನ ಬೈಕ್ ಕೊಡಿಸಿದ ಮಗನ ತಬ್ಬಿ ಕಣ್ಣೀರು ಹಾಕಿದರು.
ತಂದೆಗೆ ಬೈಕ್ ಕೊಡಿಸಿದ ಉಜ್ವಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಜೊತೆಗೆ “ನಿಮ್ಮನ್ನು ವ್ಯಕ್ತಪಡಿಸಲು ಪದಗಳಿಲ್ಲ, ನೀವು ನನ್ನ ಸೂಪರ್ ಮ್ಯಾನ್, ಸೂಪರ್ ಗಾಡ್ ಎಲ್ಲವೂ. ನನ್ನ ಅಜ್ಜ ಸಬ್ ಇನ್ಸ್‌ಪೆಕ್ಟರ್ ಆಗಿದ್ದರು. ಅವರ ಬೈಕ್ ಅನ್ನು ನನ್ನ ತಂದೆ ಪ್ರೀತಿಸುತ್ತಿದ್ದರು. ಆದರೆ ನನ್ನ ಅಜ್ಜ ನಿವೃತ್ತಿಯಾದ ನಂತರ ಆ ಬೈಕನ್ನು ಇಲಾಖೆಗೆ ಹಿಂತಿರುಗಿಸಿದರು. ಕಳೆದ ವರ್ಷದ ತನಕ ನಾವು ಕೇವಲ ಬೈಕ್ ನ ಬೆಲೆಯನ್ನು ಪರಿಶೀಲಿಸಲು ಶೋರೂಮ್‌ಗೆ ಭೇಟಿ ನೀಡಿದಾಗ ನನ್ನ ತಂದೆ ಈ ಬೈಕನ್ನು ಇಷ್ಟು ಪ್ರೀತಿಸುತ್ತಾರೆಂದು ನನಗೆ ತಿಳಿದಿರಲಿಲ್ಲ. ಅಂದು ಈ ಬೈಕ್ ನೋಡಿದ ನನ್ನ ತಂದೆ ನಾವು ಈ ಬೈಕ್ ಖರೀದಿಸಲು ಸಾಧ್ಯವಿಲ್ಲ. ಇದು ತುಂಬಾ ದುಬಾರಿಯಾಗಿದೆ ಎನ್ನುತ್ತಾ ಕುತೂಹಲದಿಂದ ಆ ಬೈಕ್ ನೋಡುತ್ತಿದ್ದಾಗ ನನಗೆ ಅವರಿಗೆ ಬೈಕ್ ಮೇಲೆ ಎಷ್ಟು ಪ್ರೀತಿಯಿದೆ ಎಂಬುದು ಅರ್ಥವಾಯಿತು. ಹೇಗೆಂದರೆ, ಅವರ ತಂದೆ ಓಡಿಸುತ್ತಿದ್ದ ಬೈಕ್ ನ ಹೊಸ ಆವೃತ್ತಿ ಇದಾಗಿತ್ತು.
ಆದ್ದರಿಂದ ಇದಕ್ಕಿಂತ ಹೆಚ್ಚಿನ ಉಡುಗೊರೆ ಇರಲಾರದು ಎಂದು ಭಾವಿಸಿದೆ. ಈ ಬೈಕ್ ಕೊಡಿಸಿದರೆ ನಮ್ಮ ತಂದೆಗೆ ಸಂತೋಷವಾಗುತ್ತದೆಂದು ನಾನು ಹೊಸ ಬೈಕ್ ಕೊಡಿಸಿದೆ ಎಂದು ಉಜ್ವಲ್ ತಿಳಿಸಿದ್ದಾರೆ.
ಹಾಗು ತಮ್ಮ ಜೀವನದಲ್ಲಿ ಉಜ್ವಲ್ ತೆಗೆದುಕೊಂಡ ನಿರ್ಧಾರಗಳನ್ನು ಅವರ ತಂದೆ ಹೇಗೆ ಗೌರವಿಸಿದರೆಂಬ ಬಗ್ಗೆಯೂ ಅವರು ಪೋಸ್ಟ್ ನಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ.
ಈ ಹೃದಯಸ್ಪರ್ಶಿ ಪೋಸ್ಟ್ ಮೆಚ್ಚಿಕೊಂಡ ನೆಟ್ಟಿಗರು ನಿಮಗೆ ದೇವರು ದೀರ್ಘಾಯುಷ್ಯವನ್ನು ನೀಡಲಿ ಎಂದು ಹರಿಸಿದ್ದಾರೆ.