ಉತ್ತರ ಪ್ರದೇಶದ ಅಮ್ರೋಹಾ ನಗರದ ಕತ್ರಾ ಗುಲಾಮ್ ಅಲಿ ಪ್ರದೇಶದಲ್ಲಿನ ಮನೆಯಲ್ಲಿ ಶುಕ್ರವಾರ ತಡರಾತ್ರಿ 67 ವರ್ಷದ ತಂದೆ ಮತ್ತು 27 ವರ್ಷದ ದತ್ತು ಪಡೆದ ಸಹೋದರಿಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
42 ವರ್ಷದ ಮಗ ಇಶಾಂಕ್ ಅಗರ್ವಾಲ್ ತನ್ನ ತಂದೆ ಯೋಗೇಶ್ ಚಂದ್ ಅಗರ್ವಾಲ್ ಮತ್ತು ಮೂರು ವರ್ಷಗಳ ಹಿಂದೆ ದತ್ತು ಪಡೆದ ಸೃಷ್ಟಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ತಂದೆಯೊಂದಿಗೆ ಆಸ್ತಿ ವಿಚಾರವಾಗಿ ವಿವಾದವಿತ್ತು.
ಅರ್ಧ ಆಸ್ತಿಯನ್ನು ಸೃಷ್ಟಿ ಹೆಸರಿಗೆ ನೋಂದಣಿ ಮಾಡಿಸಿದ್ದಾಗಿ ಆತ ಹೇಳಿದ್ದಾನೆ. ಆಕೆ ಯೋಗೇಶ್ ಅವರ ಸೋದರ ಮಾವನ ಮಗಳು ಎಂದು ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಯೋಗೇಶ್ ಚಂದ್ ಅಗರ್ವಾಲ್ ಅವರು ಅಮ್ರೋಹ ವ್ಯಾಪಾರಿ ಮಂಡಲದ ಜಿಲ್ಲಾ ಮುಖ್ಯಸ್ಥರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗವಾದ ಸೇವಾ ಭಾರತಿಯ ಪೋಷಕರಾಗಿದ್ದರು.
ಇಶಾಂಕ್ ರಟ್ಟಿನ ವ್ಯಾಪಾರವನ್ನು ಮಾಡಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ತನ್ನ ಪತ್ನಿ ಮಾನ್ಸಿಯೊಂದಿಗೆ ನವದೆಹಲಿಯಲ್ಲಿ ನೆಲೆಸಿದ್ದಾರೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪೋಷಕರ ಮನೆಗೆ ಬರುತ್ತಿದ್ದ ಅವರು ಶುಕ್ರವಾರ ಬೆಳಗ್ಗೆ ಅಮ್ರೋಹಾ ತಲುಪಿದ್ದರು.
ಇಶಾಂಕ್ ತನ್ನ ತಂದೆ ಮತ್ತು ದತ್ತು ಪಡೆದ ಸಹೋದರಿಯ ಅಂತ್ಯಕ್ರಿಯೆಯ ನಂತರ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆಯ ದೂರು ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಕುಟುಂಬದ ನಾಲ್ವರೂ ಒಟ್ಟಿಗೆ ಊಟ ಮಾಡಿದ್ದು, ತಾನು ಮತ್ತು ಪತ್ನಿ ಮೊದಲ ಮಹಡಿಯಲ್ಲಿ ಮಲಗಿದ್ದರೆ, ತಂದೆ ಮತ್ತು ದತ್ತು ಪಡೆದ ಸಹೋದರಿ ನೆಲ ಮಹಡಿಯಲ್ಲಿ ಮಲಗಿದ್ದರು. ತನ್ನ ತಂದೆ ಮತ್ತು ಸಹೋದರಿ ಅಪರಿಚಿತ ಹಂತಕರಿಂದ ಕೊಲೆಯಾದ ಸಮಯದಲ್ಲಿ ನನಗೆ, ಪತ್ನಿಗೆ ಯಾವುದೇ ಧ್ವನಿ ಕೇಳಿಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು ಶನಿವಾರ ಇಶಾಂಕ್ ಅಗರ್ವಾಲ್ ಅವರನ್ನು ಬಂಧಿಸಿದ್ದಾರೆ. ಇಬ್ಬರು ಸಾವನ್ನಪ್ಪಿದ ಕೋಣೆಯಲ್ಲಿ ರಕ್ತದ ಕಲೆಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ. ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳಲ್ಲಿ ಕೆಲವು ರಕ್ತದ ಕಲೆಗಳನ್ನು ನಾವು ಗಮನಿಸಿದ್ದೇವೆ, ಘಟನೆಯ ಸಮಯದಲ್ಲಿ ಇಶಾಂಕ್ ಮತ್ತು ಅವರ ಪತ್ನಿ ಅವರು ಮಲಗಿದ್ದರು ಎಂದು ಹೇಳಿದ್ದಾರೆ. ಮನೆಯಲ್ಲಿ 15 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ ಎಲ್ಲವೂ ಕೆಲಸ ಮಾಡದ ಕಾರಣ ಕುಟುಂಬದ ಹತ್ತಿರದವರೇ ಹಂತಕರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇಶಾಂಕ್‌ನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ತನ್ನ ತಂದೆ ಮತ್ತು ದತ್ತು ತಂಗಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡನು. ಇಶಾಂಕ್‌ನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.