ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ ಬೋಳಾಗಿಬಿಡುತ್ತೇನೋ ಅಂತಾನೇ ಎಲ್ಲರೂ ಟೆನ್ಷನ್ ಮಾಡಿಕೊಳ್ತಾರೆ.
ಕೂದಲು ಉದುರುವಿಕೆಗೆ ಜೆನೆಟಿಕ್ಸ್ ಜೊತೆಗೆ ಇನ್ನೂ ಕೆಲವು ಕಾರಣಗಳಿವೆ. ನಿಮ್ಮ ಕೂದಲ ಆರೈಕೆಯ ಕೆಲವೊಂದು ಹವ್ಯಾಸಗಳೇ ಮಾರಕವಾಗಬಹುದು. ಅವು ಯಾವುದು ಅನ್ನೋದನ್ನು ನೋಡೋಣ.
ಬಿಗಿಯಾಗಿ ಹೇರ್ ಬ್ಯಾಂಡ್ ಹಾಕುವುದು : ಬೆಳಗ್ಗೆ ಎದ್ದ ತಕ್ಷಣ ಎಲ್ರೂ ಕೂದಲನ್ನು ಹೇರ್ ಬ್ಯಾಂಡ್ ನಿಂದ ಗಟ್ಟಿಯಾಗಿ ಬಿಗಿದು ಬಿಡ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ. ಯಾಕಂದ್ರೆ ಕೂದಲಿನ ಬುಡ ಅಷ್ಟೊಂದು ಗಟ್ಟಿಯಾಗಿರುವುದಿಲ್ಲ. ನಿಧಾನವಾಗಿ ಕೂದಲನ್ನು ಒಟ್ಟುಗೂಡಿಸಿ, ಸಡಿಲವಾದ ಹೇರ್ ಬ್ಯಾಂಡ್ ಹಾಕಿ.
ಅತಿಯಾದ ಒತ್ತಡ : ಅತಿಯಾದ ಕೂದಲು ಉದುರುವಿಕೆಗೆ ಒತ್ತಡ ಕೂಡ ಕಾರಣ. ಆದ್ರೆ ಇದು ತಾತ್ಕಾಲಿಕ. ಟೆಲೋಜಿನ್ ಎಫ್ಲುವಿಯಮ್ ಅಂತಾ ಇದನ್ನು ಕರೆಯಲಾಗುತ್ತದೆ. ಈ ರೀತಿ ಒತ್ತಡದಿಂದ ಕೂದಲು ಉದುರುವಿಕೆ ಕೆಲವು ವಾರ ಅಥವಾ ತಿಂಗಳುಗಳ ವರೆಗೆ ಇರಬಹುದು. ಚೆನ್ನಾಗಿ ರಿಲ್ಯಾಕ್ಸ್ ಮಾಡಿ, ಧ್ಯಾನ, ಪ್ರಾಣಾಯಾಮ ಮಾಡಿದ್ರೆ ಅದೇ ಇದಕ್ಕೆ ಉತ್ತಮ ಚಿಕಿತ್ಸೆ.
ಕೂದಲು ಬಾಚುವಿಕೆ : ನೂರು ಬಾರಿ ಕೂದಲನ್ನು ಬಾಚಿದಾಕ್ಷಣ ಅದು ಹೊಳೆಯಲಾರಂಭಿಸುತ್ತದೆ ಎಂಬ ಭ್ರಮೆ ಬೇಡ. ಕೂದಲನ್ನು ನಯವಾಗಿ ಬಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಒರಟು ಒರಟಾಗಿ ಎಳೆದಾಡಿ ಬಾಚಿಕೊಳ್ಳುವುದರಿಂದ ಕೂದಲ ಬುಡಕ್ಕೆ ಹಾನಿಯಾಗುತ್ತದೆ. ಇದರಿಂದ ಉದುರುವಿಕೆ ಹೆಚ್ಚಾಗಬಹುದು. ಸ್ಪ್ಲಿಟ್ ಹೇರ್ ಗೆ ಇದೂ ಒಂದು ಕಾರಣ.
ಹಾರ್ಮೋನ್ ಅಸಮತೋಲನ : ದೇಹದಲ್ಲಿನ ಹಾರ್ಮೋನ್ ಅಸಮತೋಲನದಿಂದ್ಲೂ ಕೂದಲು ಉದುರುತ್ತದೆ. ಹಾರ್ಮೋನ್ ಏರಿಳಿತಕ್ಕೆ ತಕ್ಕಂತೆ ನಿಮ್ಮ ಕೂದಲು ಮೃದು ಮತ್ತು ಒರಟಾಗುತ್ತದೆ. ರುತುಚಕ್ರ, ಗರ್ಭಾವಸ್ಥೆಯ ಸಮಯದಲ್ಲಿ ಕೂದಲು ಉದುರಬಹುದು. ಪಿಸಿಓಡಿ ಸಮಸ್ಯೆಯಿದ್ದರೂ ಕೂದಲು ಉದುರಬಹುದು. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಪಡೆಯಿರಿ.