ನವದೆಹಲಿ: ಪೇಟಿಎಂ, ಫೋನ್ ಪೇ, ಗೂಗಲ್ ಪೇ ಸೇರಿದಂತೆ ಅನೇಕ ರೀತಿಯ ಆನ್ಲೈನ್ ಪಾವತಿ ವೇದಿಕೆಗಳಲ್ಲಿ ಉಚಿತವಾಗಿ ಹಣಕಾಸಿನ ವಹಿವಾಟು ನಡೆಸಲಾಗುತ್ತಿದೆ. ಒಂದು ವೇಳೆ ಕಂಪನಿಗಳು ಸೇವೆಗೆ ಶುಲ್ಕ ವಿಧಿಸಿದಲ್ಲಿ ಯುಪಿಐ ಬಳಕೆಯನ್ನೇ ಸ್ಥಗಿತಗೊಳಿಸುವುದಾಗಿ 73ರಷ್ಟು ಜನ ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೋಕಲ್ ಸರ್ಕಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶುಲ್ಕ ಪಾವತಿಸಿ ಯುಪಿಐ ವಹಿವಾಟು ಮಾಡುವುದಾಗಿ ಶೇಕಡ 27ರಷ್ಟು ಜನ ಹೇಳಿದ್ದಾರೆ. ಕಳೆದ ವರ್ಷ ಯುಪಿಐ ಬಳಕೆ ಮೇಲೆ ವಹಿವಾಟು ಶುಲ್ಕ ಕಡಿತವಾಗಿರುವುದಾಗಿ ಕೆಲವರು ತಿಳಿಸಿದ್ದು, ತಮ್ಮ ಖಾತೆಯಿಂದ ಎರಡಕ್ಕೂ ಹೆಚ್ಚು ಬಾರಿ ಹಣ ಕಡಿತವಾಗಿದೆ ಎಂದು ಹೇಳಿದ್ದಾರೆ.
ದೇಶದ 364 ಜಿಲ್ಲೆಗಳಲ್ಲಿ 34,000 ಮಂದಿಯನ್ನು ಆನ್ಲೈನ್ ಮೂಲಕ ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿದೆ. ಆರ್‌ಬಿಐ ಯುಪಿಐ ವಹಿವಾಟಿನ ಮೇಲೆ ಹಲವು ಹಂತಗಳಲ್ಲಿ ಶುಲ್ಕ ವಿಧಿಸುವ ಪ್ರಸ್ತಾಪವನ್ನು 2022ರ ಆಗಸ್ಟ್ ನಲ್ಲಿ ಮುಂದಿಟ್ಟಿದ್ದು, ಇದನ್ನು ಚರ್ಚಾ ಹಂತದಲ್ಲಿದೆ.
ಮೊಬೈಲ್ ರೀಚಾರ್ಜ್ ಸೇರಿದಂತೆ ಕೆಲವು ಸೇವೆಗಳಿಗೆ ಯುಪಿಐ ಸೇವಾ ಕಂಪನಿಗಳು ಈಗಾಗಲೇ ಒಂದು, ಎರಡು ರೂಪಾಯಿ ಸೇವಾ ಶುಲ್ಕ ವಿಧಿಸುತ್ತಿವೆ. ಸಮೀಕ್ಷೆಯಲ್ಲಿ ಶೇಕಡ 37 ರಷ್ಟು ಬಳಕೆದಾರರು ಕಳೆದ 12 ತಿಂಗಳಲ್ಲಿ ಎರಡಕ್ಕೂ ಹೆಚ್ಚು ಸಲ ಯುಪಿಐ ಪಾವತಿ ಮೇಲಿನ ಶುಲ್ಕ ಕಡಿತವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸೇವಾ ಶುಲ್ಕ ವಿಧಿಸಿದಲ್ಲಿ ಯುಪಿಐ ಬಳಕೆ ಕೈಬಿಡುವುದಾಗಿ 73 ರಷ್ಟು ಮಂದಿ ಲೋಕಲ್ ಸರ್ಕಲ್ ಸಮೀಕ್ಷೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.