ಬೆಳಗಾವಿ(ಸುವರ್ಣಸೌಧ): ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ 3ರ ವಿತರಣೆಯ ಲೋಪದೋಷ ಸರಿಪಡಿಸಲು ಮುಂದಿನ ಎರಡು ತಿಂಗಳಲ್ಲಿ ಸಚಿವ ಸಂಪುಟ ಉಪ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಭೀಮಣ್ಣ ನಾಯಕ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಭೀಮಣ್ಣ ನಾಯಕ ಅವರು, ಶಿರಸಿ, ಸಿದ್ದಾಪುರ ಕ್ಷೇತ್ರದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ ನಂಬರ್ 3 ನೀಡುತ್ತಿಲ್ಲ. ಇದರಿಂದ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆಗಳಲ್ಲಿರುವ ತಮ್ಮ ಮನೆಗಳ ನಿರ್ಮಾಣಕ್ಕೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಫಾರಂ ನಂಬರ್ 3 ರಾಜ್ಯದಾದ್ಯಂತ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ರಚಿಸಿದ ಸಂಪುಟ ಉಪ ಸಮಿತಿ ಈಗಾಗಲೇ ಎರಡು ಸಭೆ ನಡೆಸಿದೆ. ಮೂರನೇ ಸಭೆ ಶೀಘ್ರವೇ ನಡೆಯಲಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬಿಬಿಎಂಪಿಯಲ್ಲಿ ಎ, ಬಿ ಖಾತೆ ನೀಡುವ ರೀತಿ ಇತರೆ ಪ್ರದೇಶಗಳಲ್ಲಿ ಬಿ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಹಳೆಯ ಪಟ್ಟಣ ನಗರ ಪ್ರದೇಶಗಳಲ್ಲಿ ಯೋಜಿತ ನಕ್ಷೆಗಳಿರಲಿಲ್ಲ. ಫಾರಂ ಸಿ ನೀಡಲು ಯೋಜಿತ ನಕ್ಷೆ ನಿರಕ್ಷೇಪಣಾ ಪತ್ರ ಸೇರಿ ಹಲವು ಷರತ್ತು ವಿಧಿಸಲಾಗಿದೆ. ಅವು ಲಭ್ಯವಿಲ್ಲದ ಕಾರಣ ಸಮಸ್ಯೆ ಹೆಚ್ಚಿದ್ದು, ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.