![](https://kannadadunia.com/wp-content/uploads/2022/02/dead_body202109041631142021110508445620220219122317.jpg)
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳ್ಳಿ ಗ್ರಾಮದ ಯೋಧ ಪ್ರವೀಣ್ ಸುಭಾಷ್ ಖಾನಗೌಡ್ರ(24) ಬುಧವಾರ ತಮಿಳುನಾಡಿನ ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ.
ಕೃಷಿಕ ಕುಟುಂಬದ ಸುಭಾಷ್ ಮತ್ತು ಮಹಾದೇವಿ ದಂಪತಿಯ ಪುತ್ರರಾದ ಪ್ರವೀಣ್ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೊಚ್ಚಿ, ಅಂಡಮಾನ್ ನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಚೆನ್ನೈಗೆ ವರ್ಗಾವಣೆಗೊಂಡಿದ್ದರು.
ಅವರು ಮೃತಪಡುವ ಒಂದು ಗಂಟೆಯ ಮೊದಲು ತಾಯಿ ಮತ್ತು ಅಣ್ಣನೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ನಂತರದಲ್ಲಿ ಅವರು ಗುಂಡು ತಾಗಿ ಮೃತಪಟ್ಟಿರುವುದಾಗಿ ಮಾಹಿತಿ ಗೊತ್ತಾಗಿದೆ. ಸೇನಾಧಿಕಾರಿಗಳು ಇದು ಮಿಸ್ ಫೈರ್ ಎಂದು ಹೇಳಿದ್ದು, ತನಿಖೆ ಕೈಗೊಳ್ಳಲಾಗಿದೆ. ನಂತರ ಘಟನೆಯ ಕುರಿತ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಹೇಳಲಾಗಿದೆ.
ಫೆಬ್ರವರಿ 14ರಂದು ಬೆಳಗ್ಗೆ ಪ್ರವೀಣ್ ಮೃತದೇಹವನ್ನು ಮೆರವಣಿಗೆ ಮೂಲಕ ತರಲಾಗುವುದು. ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಿದ್ದು, ಕಲ್ಲೋಳಿ ಪಂಚಾಯಿತಿಯ ಪಕ್ಕದ ಜಾಗದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.