
ಬೆಂಗಳೂರು: ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್ಸೆಟ್ ಗಳನ್ನು ಅಳವಡಿಸಲು ನೀಡಲಾಗುವ ಸಹಾಯಧನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.
ವಿದ್ಯುತ್ ಜಾಲದಿಂದ 500 ಮೀಟರ್ ಗಿಂತ ಸಮೀಪದಲ್ಲಿರುವ ಕೃಷಿ ಪಂಪ್ಸೆಟ್ ಗಳಿಗೆ ನೇರವಾಗಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಿದ್ದು, 500 ಮೀಟರ್ ಗಿಂತ ದೂರದ ಪಂಪ್ಸೆಟ್ ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಇಂಧನ ಇಲಾಖೆ ಆದೇಶ ಹೊರಡಿಸಿದೆ.
ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್ ಗಳ ಅಳವಡಿಸಲು ಕೇಂದ್ರ ಸರ್ಕಾರ ಶೇಕಡ 30ರಷ್ಟು ಸಹಾಯಧನ ನೀಡಲಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿದ್ದ ಸಹಾಯಧನದ ಮೊತ್ತವನ್ನು ಶೇ. 30 ರಿಂದ ಶೇ.50ಕ್ಕೆ ಹೆಚ್ಚಳ ಮಾಡಲಾಗಿದ್ದು, ಶೇ. 20ರಷ್ಟು ಮೊತ್ತವನ್ನು ರೈತರು ಭರಿಸಬೇಕಿದೆ. ವಿದ್ಯುತ್ ಸಂಪರ್ಕಕ್ಕೆ ರೈತರು ಈಗಾಗಲೇ ಪಾವತಿಸಿದ ಮೊತ್ತವನ್ನು ಅವರ ಪಾಲಿನ ವಂತಿಗೆಯಾಗಿ ಪರಿಗಣಿಸುವಂತೆ ಇಂಧನ ಇಲಾಖೆ ತಿಳಿಸಿದೆ.
ಸೌರ ವಿದ್ಯುತ್ ಚಾಲಿತ ಪಂಪ್ಸೆಟ್ ಅಳವಡಿಸಿದ ನಂತರ ಅಂತಹ ರೈತರು ವಿದ್ಯುತ್ ಜಾಲದಿಂದ ಪಡೆದ ಸಂಪರ್ಕವನ್ನು ಕಡಿತಗೊಳಿಸಬೇಕು. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ 10 ಹೆಚ್.ಪಿ. ವರೆಗಿನ ಸೌರ ವಿದ್ಯುತ್ ಚಾಲಿತ ಪಂಪ್ಸೆಟ್ ಅಳವಡಿಸಬಹುದು. ಆದರೆ 7.5 ಹೆ.ಪಿ. ವರೆಗೆ ಮಾತ್ರ ಸಹಾಯಧನ ಸೀಮಿತವಾಗಿರುತ್ತದೆ ಎಂದು ಹೇಳಲಾಗಿದೆ.