ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡಗಳಿಗೆ ಸೌರಶಕ್ತಿ ಅಳವಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೊರತೆ ಕಾರಣ ಅರ್ಜಿದಾರರು ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಸೌರಶಕ್ತಿ ಅಳವಡಿಸುವುದರಿಂದ ಬೆಳಗ್ಗೆ ಅರ್ಜಿ ಸಲ್ಲಿಸಿದರೆ ಒಂದೇ ದಿನದಲ್ಲಿ ದಾಖಲೆ ಪಡೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಗ್ರಾಪಂ ಕಚೇರಿ ಕಟ್ಟಡಳಿಗೆ ಸೋಲಾರ್ ವಿದ್ಯುತ್ ಅಳವಡಿಕೆ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಜಲಶಕ್ತಿ ಯೋಜನೆಯನ್ನು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿ ಮಾಡಲಾಗುತ್ತಿದೆ. ಮಳೆನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಯೋಜನೆ ಇದಾಗಿದೆ. ಚೆಕ್ ಡ್ಯಾಮ್, ಹಳ್ಳಕೊಳ್ಳ, ಬೋರ್ವೆಲ್, ಕೆರೆ, ಕಟ್ಟೆಗಳು ಮೊದಲಾದ ಕಡೆಗಳಲ್ಲಿ ಇಂಗುಗುಂಡಿಗಳ ಮೂಲಕ ಮಳೆ ನೀರು ಸಂಗ್ರಹ ಮಾಡಲಾಗುವುದು ಎಂದು ಹೇಳಿದ್ದಾರೆ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ಮೀರಿ ಸಾಧನೆ ಮಾಡಲಾಗಿದೆ. 15 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿದ್ದು ಕಳೆದ ವರ್ಷಕ್ಕಿಂತ ಶೇಕಡ 38 ರಷ್ಟು ಹೆಚ್ಚಳವಾಗಿದೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ 3336 ಕಿಲೋಮೀಟರ್ ರಸ್ತೆ, 26 ಸೇತುವೆ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 3.75 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.