ಕೊರೊನಾ ಮಧ್ಯೆ ಕೆನಡಾದಲ್ಲಿ ನಿಗೂಢ ರೋಗವೊಂದು ಒಕ್ಕರಿಸಿದೆ. ಕೆನಡಾದ ನ್ಯೂ ಬ್ರನ್ಸೆವಿಕ್ ನಲ್ಲಿ ಈ ನಿಗೂಢ ರೋಗಕ್ಕೆ 6 ಮಂದಿ ಬಲಿಯಾಗಿದ್ದಾರೆ. ವಿಚಿತ್ರ ಮೆದುಳಿನ ಕಾಯಿಲೆ ಅನೇಕರನ್ನು ಕಾಡ್ತಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 48 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದ್ರ ರೋಗ ಲಕ್ಷಣಗಳು ವಿಚಿತ್ರವಾಗಿವೆ. ಗೊಂದಲ, ಮರೆವು ಇದ್ರಲ್ಲಿ ಸೇರಿದೆ. ಆತಂಕ, ತಲೆತಿರುಗುವಿಕೆ, ಭ್ರಮೆ, ನೋವು ಕೂಡ ರೋಗದ ಲಕ್ಷಣ. ಸದ್ಯ ಈ ರೋಗಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಸ್ಥಳೀಯ ಅಧಿಕಾರಿಗಳು ಈ ನಿಗೂಢ ನರವೈಜ್ಞಾನಿಕ ಸಿಂಡ್ರೋಮ್ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ. ವರದಿಯ ಪ್ರಕಾರ,ಈ ರೋಗಕ್ಕೆ ಬಲಿಯಾದ 6 ಜನರ ವಯಸ್ಸು 18ರಿಂದ 85 ವರ್ಷದೊಳಗಿದೆ. ರೋಗಿಗಳು ಸಾಕಷ್ಟು ಬಳಲಿಕೆ ಅನುಭವಿಸುತ್ತಿದ್ದಾರಂತೆ. ಇದ್ರ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.
ಈ ಕಾಯಿಲೆಯಿಂದ ಬಳಲುತ್ತಿರುವ ಹುಡುಗಿಯೊಬ್ಬಳು ತನ್ನ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ. ಯಾವುದೂ ನೆನಪಿನಲ್ಲಿರುವುದಿಲ್ಲ. ಹಾಗಾಗಿ ಪದೇ ಪದೇ ಒಂದೇ ವಿಷ್ಯವನ್ನು ನೋಡುತ್ತಿರಬೇಕೆಂದು ಆಕೆ ಹೇಳಿದ್ದಾಳೆ. ಆಕೆ ಸ್ನಾಯುಗಳ ನಿಯಂತ್ರಣವನ್ನೂ ಕಳೆದುಕೊಂಡಿದ್ದಾಳಂತೆ.
ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ, ಕಳೆದ ವರ್ಷಾಂತ್ಯದಲ್ಲಿ, ಅಸಾಮಾನ್ಯ ನರವೈಜ್ಞಾನಿಕ ಪ್ರಕರಣದ ಬಗ್ಗೆ ವರದಿ ಮಾಡಿತ್ತು. ಶವಪರೀಕ್ಷೆಯನ್ನು ತನಿಖೆ ಮಾಡುವ ಮೂಲಕ ಸಂಸ್ಥೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದೆ.
ಬ್ಲಡ್ ವಾಚ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ನಿಗೂಢ ಕಾಯಿಲೆಯಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ತನಿಖೆ ನಂತ್ರವೇ ಇದ್ರ ಬಗ್ಗೆ ಸ್ಪಷ್ಟ ಉತ್ತರ ಸಿಗಬೇಕಿದೆ.