ಅಫ್ಘಾನಿಸ್ತಾನ, ತಾಲಿಬಾನ್ ವಶವಾಗಿದೆ. ತಾಲಿಬಾನ್ ಭಯದಿಂದಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನ ಬಿಡಲು ಇರುವ ಒಂದೇ ಒಂದು ದಾರಿ ಕಾಬೂಲ್ ವಿಮಾನ ನಿಲ್ದಾಣ. ಭಯದಲ್ಲಿ ದೇಶ ತೊರೆಯಲು ಮುಂದಾದ ಜನರು ವಿಮಾನ ನಿಲ್ದಾಣಕ್ಕೆ ಬಂದು ಸೇರಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭಾರೀ ಜನಸಂದಣಿಯಿದೆ.
ವಿಮಾನ ನಿಲ್ದಾಣದಲ್ಲಿ ತಾಲಿಬಾನಿಗಳು, ಮಹಿಳೆಯರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸೈನಿಕರು ಕೂಡ ಗುಂಡು ಹಾರಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಗುಂಡಿನ ದಾಳಿಗೆ ಐದು ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯನ್ನು ತಾಲಿಬಾನ್ ಖಚಿತಪಡಿಸಿಲ್ಲ. ಪ್ರಸ್ತುತ ವಿಮಾನ ನಿಲ್ದಾಣವು ಅಮೆರಿಕದ ಸೈನಿಕರ ನಿಯಂತ್ರಣದಲ್ಲಿದೆ.
ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಸದ್ಯ ವಾಣಿಜ್ಯ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಗಾಗಿ ಅನೇಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಭಾರತ, ತನ್ನ ನಾಗರಿಕರನ್ನು ರಕ್ಷಿಸಲು ಚಬಹಾರ್ ಪೋರ್ಟ್ ಬಳಸಲಿದೆ ಎನ್ನಲಾಗ್ತಿದೆ.
ವೀಸಾ, ಟಿಕೆಟ್ ಇಲ್ಲದೆ ಜನರು ವಿಮಾನ ನಿಲ್ದಾಣಕ್ಕೆ ಬಂದ್ರೆ ಇನ್ನೊಂದು ಕಡೆ ತಾಲಿಬಾನಿ ಉಗ್ರರು, ಅಫ್ಘಾನಿಸ್ತಾನದ ಬೀದಿಯಲ್ಲಿ ಸುತ್ತುತ್ತಿದ್ದಾರೆ. ಆಗಸ್ಟ್ 17ರ ಬೆಳಿಗ್ಗೆ 8 ಗಂಟೆಯವರೆಗೆ ಮನೆಯಲ್ಲಿ ಬಂಧಿಯಾಗಿರುವಂತೆ ಜನರಿಗೆ ಸೂಚನೆ ನೀಡಲಾಗಿದೆ.