ತೈವಾನ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಜೂಡೋ ಕ್ಲಾಸ್ ನಲ್ಲಿ ಕೋಚ್ ಏಳು ವರ್ಷದ ಬಾಲಕನನ್ನು ನೆಲದ ಮೇಲೆ 27 ಬಾರಿ ಅಪ್ಪಳಿಸಿದ್ದಾನೆ. ಇದ್ರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಗು ಎರಡು ತಿಂಗಳು ಕೋಮಾದಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದೆ.
ಘಟನೆ ಏಪ್ರಿಲ್ 21 ರಂದು ನಡೆದಿದೆ. 7 ವರ್ಷದ ಹುವಾಂಗ್ ಜೂಡೋ ಕಲಿಯುತ್ತಿದ್ದ. ಏಪ್ರಿಲ್ 21 ರಂದು ಕೋಚ್ ಕೆಲವು ಚಲನೆಗಳ ಬಗ್ಗೆ ಹೇಳ್ತಿದ್ದರು. ಈ ಸಮಯದಲ್ಲಿ ಹುವಾಂಗ್ ನನ್ನು 27 ಬಾರಿ ನೆಲಕ್ಕೆ ಎಸೆದಿದ್ದಾರೆ. ಹುವಾನ್ ಅಲ್ಲಿಯೇ ಪ್ರಜ್ಞೆ ತಪ್ಪಿದ್ದಾನೆ. ಒಂದೆರಡು ಬಾರಿ ವಾಂತಿ ಮಾಡಿಕೊಂಡಿದ್ದಾನಂತೆ. ಆತನನ್ನು ಫಾಂಗ್ ಯುವಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲ ನೀಡಲಿಲ್ಲ. ಕೋಮಾದಲ್ಲಿದ್ದ ಹುವಾಂಗ್ ಬ್ರೇನ್ ಡೆಡ್ ಆಗಿತ್ತು.
ಮಗುವಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಆತ 70 ದಿನಗಳ ಕಾಲ ಕೋಮಾದಲ್ಲಿದ್ದ ಎಂದು ವೈದ್ಯರು ತಿಳಿಸಿದ್ದರು. ಮಗುವಿಗೆ ಉಸಿರಾಟದ ತೊಂದರೆಯೂ ಇತ್ತು. ಇದಲ್ಲದೆ ಅನೇಕ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು.