
ಬೆಂಗಳೂರು: ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿಯ ಮೊತ್ತ ಕಳೆದ 12 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ. ಪರಿಷ್ಕರಣೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಬಾರಿಯ ಬಜೆಟ್ ನಲ್ಲಿ ಪರಿಷ್ಕರಣೆಯಾಗಬಹುದು ಎನ್ನುವ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ವೈ.ಎಂ. ಸತೀಶ್ ಅವರು ವಿಕಲಚೇತನರ ಪಿಂಚಣಿ ಪರಿಷ್ಕರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು, ಕೇಂದ್ರ ಸರ್ಕಾರ ದೈಹಿಕ ಮತ್ತು ಮಾನಸಿಕ ವಿಶೇಷ ಚೇತನರಿಗೆ ನೀಡುವ ಸಾಮಾಜಿಕ ಭದ್ರತೆ ಪಿಂಚಣಿ ಮೊತ್ತ ಪರಿಷ್ಕರಣೆ ಮಾಡಿದಲ್ಲಿ ರಾಜ್ಯ ಸರ್ಕಾರವು ತನ್ನ ಮೊತ್ತವನ್ನು ಪರಿಷ್ಕರಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 75 ಲಕ್ಷ ಜನರಿಗೆ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುತ್ತಿದೆ. ದೇಶದಲ್ಲಿಯೇ ಅತ್ಯಧಿಕ ಮೊತ್ತವನ್ನು ರಾಜ್ಯ ಈ ಬಾಬ್ತಿನಲ್ಲಿ ಬಿಡುಗಡೆ ಮಾಡುತ್ತಿದೆ. ವಿಕಲಚೇತನರ ಪಿಂಚಣಿ ಪರಿಷ್ಕರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.