ಬೆಳಗಾವಿ: ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಸುಳ್ಳುಸುದ್ದಿಗಳು, ಪ್ರಚೋದನಾಕಾರಿ ಹೇಳಿಕೆ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವುದು ಕಂಡುಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಪೊಲೀಸ್ ಆಯುಕ್ತಾಲಯಕ್ಕೆ ಸೋಮವಾರ ಭೇಟಿ ನೀಡಿದ ಅವರು, ಸಾಮಾಜಿಕ ಜಾಲತಾಣ ನಿಗಾ ಘಟಕ, ನಿಯಂತ್ರಣ ಕೊಠಡಿಗಳನ್ನು ಖುದ್ದಾಗಿ ವೀಕ್ಷಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಸಾಮಾಜಿಕ ಜಾಲತಾಣಗಳ ನಿಗಾ ಘಟಕಕ್ಕೆ ಭೇಟಿ ನೀಡಿದ ಅವರು, ಆಕ್ಷೇಪಾರ್ಹ ಮಾಹಿತಿ, ಸುಳ್ಳುಸುದ್ದಿಗಳು ಬಂದಾಗ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸೂಕ್ತ ತಾಂತ್ರಿಕ ತರಬೇತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಿದರು.
ಇದಾದ ಬಳಿಕ ನಗರ ನಿಯಂತ್ರಣ ಕೊಠಡಿಯನ್ನು ಹಾಗೂ ವೈರ್ ಲೆಸ್ ವಿಭಾಗದ ಕಾರ್ಯಚಟುವಟಿಕೆಗಳನ್ನು ಹಾಗೂ ದಾಖಲೆ ಕೊಠಡಿಯನ್ನು ಖುದ್ದಾಗಿ ವೀಕ್ಷಿಸಿದರು.
ನಿಯಂತ್ರಣ ಕೊಠಡಿಗೆ ಬರುವ ಕರೆಗಳು ಹಾಗೂ ಮಾಹಿತಿಯ ಲಾಗ್ ಪುಸ್ತಕವನ್ನು ಪರಿಶೀಲಿಸಿದರಲ್ಲದೇ ಪ್ರತಿಯೊಂದು ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.