
ಬೆಂಗಳೂರು: ರಾಜಕೀಯ ನಾಯಕರು, ಬೆಂಬಲಿಗರ ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಆಯೋಗ ಗಮನಿಸುತ್ತಿದ್ದು, ಜಾಲತಾಣಗಳಿಗೂ ಚುನಾವಣೆಯ ಮಾದರಿ ನೀತಿ ಸಂಹಿತೆ ಅನ್ವಯವಾಗಲಿದೆ.
ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು, ಸ್ಕ್ರೋಲ್ ಸಂದೇಶಗಳನ್ನು ಪ್ರಕಟಿಸಲು ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಅನುಮತಿ ಪಡೆಯಬೇಕಿದೆ. ಅಭ್ಯರ್ಥಿಗಳ ಹೆಸರಲ್ಲಿನ ಸಾಮಾಜಿಕ ಜಾಲತಾಣದಲ್ಲಿ ನಡೆಸುವ ಪ್ರಚಾರದ ವೆಚ್ಚ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಹೋಗುತ್ತದೆ. ಅಭ್ಯರ್ಥಿ ಆಯೋಗಕ್ಕೆ ತಮ್ಮ ಜಾಲತಾಣಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.
ಜಾಲತಾಣಗಳಲ್ಲಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಮತ್ತೊಬ್ಬರನ್ನು ಹೀಯಾಳಿಸುವ ಸಂದೇಶಗಳನ್ನು ಬಿತ್ತರಿಸುವುದು, ಕಳುಹಿಸುವುದು ಅಪರಾಧವಾಗಿರುತ್ತದೆ. ಇಂತಹ ಸಂದೇಶಗಳನ್ನು ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವ್ಯಕ್ತಿಯೊಂದಿಗೆ ಅಡ್ಮಿನ್ ಗಳು ಕೂಡ ಜವಾಬ್ದಾರರಾಗಿರುತ್ತಾರೆ ಎಂದು ಹೇಳಲಾಗಿದೆ.