ಸಾಮಾಜಿಕ ಜಾಲತಾಣ ನೀರಿನಷ್ಟೇ ಅಗತ್ಯ ಎನ್ನುವಂತಾಗಿದೆ. ಇವಿಲ್ಲದೆ ಒಂದು ಗಳಿಗೆ ಇರೋದು ಅನೇಕರಿಗೆ ಕಷ್ಟ. ಫೇಸ್ಬುಕ್, ವಾಟ್ಸ್ ಅಪ್, ರೀಲ್ಸ್, ಯುಟ್ಯೂಬ್ ಹೀಗೆ ಒಂದಾದ್ಮೇಲೆ ಒಂದನ್ನು ನೋಡ್ತಾ ಸಮಯ ಕಳೆಯುವ ಜನರಿಗೆ ಇದೊಂದು ಚಟವಾಗಿದೆ. ಮನೆಯಲ್ಲಿರೋ ನಾಲ್ಕು ಮಂದಿ ಕೈನಲ್ಲೂ ಮೊಬೈಲ್ ಇರುತ್ತದೆ. ಮನೆ ಶಾಂತವಾಗಿದ್ದು, ಮೊಬೈಲ್ ನಿಂದ ಸೌಂಡ್ ಬರ್ತಿರುತ್ತದೆ. ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಡೆಲಾಯ್ಟ್ ಹೊಸ ಸಂಶೋಧನೆ ನಡೆಸಿದೆ. ಇದ್ರ ಸಂಶೋಧನೆ ಪ್ರಕಾರ, ಅದ್ರ ಶೇಕಡಾ 71 ರಷ್ಟು ಉದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುತ್ತಾರಂತೆ. ಇದ್ರಿಂದ ಅವರ ಕೆಲಸದ ಗುಣಮಟ್ಟ ಹಾಳಾಗಿದೆ ಎಂದು ಸಂಶೋಧನಾ ಅಧ್ಯಯನ ಹೇಳಿದೆ.
ಸಾಮಾಜಿಕ ಜಾಲತಾಣ ಬಳಕೆಗೆ ವಯಸ್ಸಿನ ಮಿತಿಯಿಲ್ಲ ಎಂದು ವರದಿ ಹೇಳುತ್ತದೆ. ಎಲ್ಲ ವರ್ಗದ ಹಾಗೂ ಎಲ್ಲ ವಯಸ್ಸಿನ ಜನರು ಇದನ್ನು ಬಳಕೆ ಮಾಡ್ತಿದ್ದಾರೆ. ಶೇಕಡಾ 30 ರಷ್ಟು ವಯಸ್ಕರು ನಿರಂತರವಾಗಿ ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ್ದಾರೆ. ಶೇಕಡಾ 10 ರಷ್ಟು ಮಕ್ಕಳು ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ್ದಾರೆ. ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಇಂಟರ್ನೆಟ್ ಬಳಕೆ ಮಾಡ್ತಿದ್ದರೂ ಅವರ ಮೇಲಾಗುವ ಪ್ರಭಾವ ಹೆಚ್ಚು ಎಂದು ಸಂಶೋಧನೆ ಹೇಳಿದೆ.
ಚಿಕ್ಕ ಮಕ್ಕಳ ಫೋನ್ ಬಳಕೆಯ ಅಂಕಿಅಂಶಗಳು ಆಘಾತಕಾರಿಯಾಗಿ ಹೊರಬಂದಿವೆ. ಈ ಅಂಕಿ ಅಂಶದ ಪ್ರಕಾರ, ಪ್ರತಿ ಒಂದೂವರೆ ವರ್ಷದ ಮಗು 5 ಗಂಟೆಗಳ ಕಾಲ ಮೊಬೈಲ್‌ನಲ್ಲಿ ಕಳೆದುಹೋಗುತ್ತದೆ.
ಇಂಟರ್ನೆಟ್‌ನ ಅತಿಯಾದ ಬಳಕೆ ಅದ್ರಲ್ಲೂ ಸಾಮಾಜಿಕ ಜಾಲತಾಣದ ಬಳಕೆ ಮಕ್ಕಳನ್ನು ಸಮಸ್ಯೆಗೆ ದೂಡುತ್ತಿದೆ. ಉತ್ಪಾದಕತೆ ಮತ್ತು ಕಣ್ಣುಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ. ಮಕ್ಕಳಲ್ಲಿ ಬೊಜ್ಜು, ಅನಾರೋಗ್ಯ, ಸಮಾಜದ ಜೊತೆ ಬೆರೆಯುವ ತೊಂದರೆ ಸೇರಿದಂತೆ ಖಿನ್ನತೆ ಮಕ್ಕಳಲ್ಲಿ ಕಾಣಿಸಿಕೊಳ್ತಿದೆ. ಮಕ್ಕಳಲ್ಲಿ ಡಿಜಿಟಲ್ ವ್ಯಸನದ ಹಾನಿಗಳ ಬಗ್ಗೆ ಜಾಗೃತಿ ಮೂಡಿಸಲಾಗ್ತಿದ್ದರೂ ಅದ್ರ ಪರಿಣಾಮ ದೊಡ್ಡ ಮಟ್ಟದಲ್ಲಿ ಕಾಣಸಿಗ್ತಿಲ್ಲ. ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆಗೆ ಪಾಲಕರು, ಮಕ್ಕಳಿಂದ ಮೊಬೈಲ್ ದೂರವಿಡುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು.