ಸಣ್ಣದೊಂದು ಸ್ಪರ್ಶವಾದರೆ ಸಾಕು, ಎಲೆಗಳನ್ನು ಮುದುಡಿಕೊಳ್ಳುವ ಮುಳ್ಳುಗಳಿಂದ ಕೂಡಿರುವ ಸಸ್ಯವೇ ಮಿಮೋಸಾ ಪುಡಿಕಾ. ಆಡುಭಾಷೆಯಲ್ಲಿ ಈ ಗಿಡಕ್ಕೆ ನಾಚಿಗೆ ಮುಳ್ಳು, ಮುಟ್ಟಿದರೆ ಮುನಿ, ಲಜ್ಜಾವತಿ, ಸಂಸ್ಕೃತದಲ್ಲಿ “ಅಂಜಲೀ ಕಾರಿಕೆ” ಇಂಗ್ಲಿಷ್ನಲ್ಲಿ ಟಚ್ ಮಿ ನಾಟ್, ಹಿಂದಿಯಲ್ಲಿ ಚುಯ್ ಮುಯ್ ಎಂದು ಕರೆಯಲಾಗುತ್ತದೆ.
ಅಮೋಘವಾದ ಔಷಧೀಯ ಗುಣ ಹೊಂದಿರುವ ನಾಚಿಕೆ ಮುಳ್ಳೀನ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ. ಮುಟ್ಟಿದ ತಕ್ಷಣ ಮುದುಡಿಕೊಳ್ಳುವ ಈ ಸಸ್ಯದ ಗುಣವು ‘ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು ಎಂದು ಸಂಶೋಧಕರು ಹೇಳಿದ್ದಾರೆ.
ಇದರ ಮುದುಡುವಿಕೆಯ ಕುರಿತು ವಿಜ್ಞಾನ ಬರಹಗಾರರೊಬ್ಬರು ಅದರ ರಹಸ್ಯವನ್ನು ಉಲ್ಲೇಖಿಸಿದ್ದು, ಸಸ್ಯದೊಳಗಿನ ‘ವಿದ್ಯುತ್ ಸಂಕೇತಗಳು’ ಅದರ ಮಡಿಸುವ ಪರಿಣಾಮವನ್ನು ಹೇಗೆ ಪ್ರಚೋದಿಸುತ್ತವೆ ಎಂಬುದನ್ನು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ವೈಜ್ಞಾನಿಕ ಜರ್ನಲ್ ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಇದು ಪ್ರಕಟವಾಗಿದೆ. ಸಸ್ಯದ ವಿದ್ಯುತ್ ಪ್ರಚೋದನೆಗಳು ಉತ್ಪತ್ತಿಯಾಗುವುದನ್ನು ಮತ್ತು ಅದರ ಮೇಲೆ ಕೀಟಗಳ ಉಪಸ್ಥಿತಿಯಿಂದಾಗಿ ಅದರ ಎಲೆಗಳು ಮಡಚಿಕೊಳ್ಳುವುದನ್ನು ತೋರಿಸುವ ವಿಡಿಯೋವನ್ನು ಜಬ್ರ್ ಹಂಚಿಕೊಂಡಿದ್ದಾರೆ.
ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಪ್ರಾಣಿಗಳು ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುಡಲು ಆರಂಭಿಸುವ ಈ ಸಸ್ಯ ಒಂದಕ್ಕೊಂದು ತಗುಲುತ್ತಾ ಹೋಗಿ ಕ್ಷಣ ಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ ಈ ಸಸ್ಯ ಮುದುಡಿಕೊಳ್ಳುತ್ತದೆ.
ಇದರಿಂದ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ. ಇದರಿಂದ ಪ್ರಾಣಿಗಳು ಬೇರೆಡೆಗೆ ಹೋಗುತ್ತವೆ. ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುತ್ತದೆ, ಹೂವು ಗಿಡದ ತುದಿಯಲ್ಲಿರುತ್ತದೆ. ಸಾಮಾನ್ಯವಾಗಿ ಈ ಹೂವಿನ ವ್ಯಾಸ 1ರಿಂದ2 ಸೆಂಟಿಮೀಟರ್ಗಳಷ್ಟೆ.