
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿದ ಆರೋಪದ ಮೇರೆಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ನಿವೇಶನ ಖರೀದಿಸಿದ ಸಂದರ್ಭದಲ್ಲಿ ಅವರ ಬದಲಿಗೆ ಮುಡಾ ತಹಶೀಲ್ದಾರ್ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಸುಳ್ಳು ಆರೋಪ ಮಾಡಿದ್ದಾರೆ. ಖರೀದಿದಾರರು ಉಪ ನೋಂದಣಾಧಿಕಾರಿ ಕಚೇರಿಗೆ ಹಾಜರಾಗದೇ ವಿನಾಯಿತಿ ಪಡೆದ ಪ್ರಕರಣಗಳಲ್ಲಿ ಅಧಿಕಾರಿಗಳ ಹೆಸರು ಉಲ್ಲೇಖಿಸಲಾಗುತ್ತದೆ. ಆದರೆ ಖರೀದಿದಾರರೇ ಶುಲ್ಕ ಪಾವತಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪ ನಿರಾಧಾರವಾಗಿದೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ದೂರು ನೀಡಿದ್ದಾರೆ.
ಎನ್.ಸಿ.ಆರ್. ದೂರು ದಾಖಲಿಸಿದ್ದ ಪೊಲೀಸರು ಕೋರ್ಟ್ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದು, ಬುಧವಾರ ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.