ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿರುವ ದೂರುದಾರ ಸ್ನೇಹಮಯಿ ಕೃಷ್ಣ, ಇದೀಗ ಪೊಲೀಸರು ತನ್ನ ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಆದಾಗ್ಯೂ ಈವರೆಗೆ ಎಫ್ಐಆರ್ ದಾಖಲಾಗಿಲ್ಲ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಮೈಸೂರಿನ ದೇವರಾಜ ಠಾಣೆಗೆ ದೂರು ನೀಡಲು ತೆರಳಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದೇ ವಾಪಾಸ್ ಕಳುಹಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದಿರುವ ಸ್ನೇಹಮಯಿ ಕೃಷ್ಣ, ಸೌಜನ್ಯಕಾದರೂ ಪೊಲೀಸರು ವಿಚಾರಣೆ ನಡೆಸುವುದು ಬೇಡವೇ? ನನ್ನ ದೂರು ಸ್ವೀಕರಿಸದೇ ವಾಪಾಸ್ ಕಳುಹಿಸಿದ್ದಾರೆ. ದೇವರಾಜ ವಿಭಾಗದ ಎಸಿಪಿಗೆ ದೂರು ನೀಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಲೋಕಾಯುಕ್ತ ಎಸ್ ಪಿ ಉದೇಶ್ ಸಿದ್ದರಾಮಯ್ಯನವರಿಗೆ ಭಯಗೊಂಡು ನಾಪತ್ತೆಯಾಗಿರಬಹುದು. ಅಥವಾ ಸಿದ್ದರಾಮಯ್ಯನವರ ಕಡೆಯವರು ಅವರನ್ನು ಗೃಹ ಬಂಧನದಲ್ಲಿ ಇರಿಸಿರಬಹುದು. ನಿನ್ನೆಯೇ ನಾನು ಬರುವ ಬಗ್ಗೆ ಮಾಹಿತಿ ನೀಡಿದ್ದೆ. ಆದರೂ ಲೋಕಾಯುಕ್ತ ಕಚೇರಿಯಲ್ಲಿ ಎಸ್ ಪಿ ಇಲ್ಲ. ಇದನ್ನು ಗಮನಿಸಿದರೆ ನನಗೆ ಅನುಮಾನವಿದೆ ಎಂದು ಕಿಡಿಕಾರಿದ್ದಾರೆ.