ಧಾರವಾಡ: ನಾಗರಹಾವೊಂದನ್ನು ಕೊಂದಿದ್ದಕ್ಕೆ ಇನ್ನೊಂದು ನಾಗರಹಾವು ಎಡೆಬಿಡದೆ ಕಾಡುತ್ತಿದೆ ಎಂದು ಭಯಗೊಂಡ ಗ್ರಾಮಸ್ಥರು ಒಂದೇ ರಾತ್ರಿಯಲ್ಲಿ ನಾಗದೇವರ ಮಂದಿರ ನಿರ್ಮಿಸಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಕಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಗರ ಪಂಚಮಿಯ ಮುನ್ನಾ ದಿನ ಗ್ರಾಮದ ಹನುಮಂತ ಜಾಧವ್ ಅವರ ಮನೆ ಹಿತ್ತಲಿನಲ್ಲಿ ದೊಡ್ಡ ನಾಗರಹಾವು ಕಾಣಿಸಿಕೊಂಡಿದ್ದು, ಯಾರಿಗಾದರೂ ಕಚ್ಚಬಹುದೆಂಬ ಭಯದಿಂದ ಅದನ್ನು ಹೊಡೆದು ಕೊಂದು ಹಾಕಿದ್ದರು. ನಂತರ ಒಂದು ವಾರದಲ್ಲಿ ಅವರ ಮನೆಯ ಹಿತ್ತಲಿನಲ್ಲಿ ಮತ್ತೊಂದು ನಾಗರಹಾವು ಪದೇ ಪದೇ ಕಾಣಿಸಿಕೊಳ್ಳಲು ಆರಂಭಿಸಿತು.
ಜೋಡಿಹಾವಿನ ಬಗ್ಗೆ ಒಂದು ಹಾವನ್ನು ಹೊಡೆದುಕೊಂದಿದ್ದರಿಂದ ಇನ್ನೊಂದು ಹಾವು ಸೇಡು ತೀರಿಸಿಕೊಳ್ಳಲು ಬಂದಿದೆ ಎಂದು ಭಯಗೊಂಡ ಜಾಧವ್ ಕುಟುಂಬದವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ದೋಷ ಪರಿಹಾರಕ್ಕೆ ಒಂದೇ ರಾತ್ರಿಯಲ್ಲೇ ದೇವಸ್ಥಾನ ನಿರ್ಮಿಸಿ ಎಂದು ಅಲ್ಲಿನ ಅರ್ಚಕರು ಸಲಹೆ ನೀಡಿದ್ದರು. ಹೀಗಾಗಿ ಗ್ರಾಮಸ್ಥರು ನಾಗದೇವರ ಮಂದಿರ ನಿರ್ಮಿಸಿದ್ದಾರೆ ಎನ್ನಲಾಗಿದೆ.