ತಿರುವನಂತಪುರಂ – ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿಕೊಂಡ ಪರಿಣಾಮ ಇತರೆ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಹಾವನ್ನು ಹುಡುಕುವ ಸಲುವಾಗಿ ಎರಡು ಗಂಟೆಗಳ ಕಾಲ ಪ್ರಯಾಣವನ್ನು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಬುಧವಾರದಂದು ಈ ಘಟನೆ ನಡೆದಿದ್ದು, ಕೇರಳದ ತಿರೂರು ಸ್ಟೇಷನ್ ಸಮೀಪಿಸಿದ ವೇಳೆ ಎಸ್ 5 ಕಂಪಾರ್ಟ್ಮೆಂಟ್ನಲ್ಲಿದ್ದ ಪ್ರಯಾಣಿಕರಿಗೆ ಹಾವು ಕಾಣಿಸಿಕೊಂಡಿದೆ ಕೂಡಲೇ ಅದರ ಫೋಟೋ ತೆಗೆದ ಅವರು ಟಿಟಿಇ ಗಮನಕ್ಕೆ ತಂದಿದ್ದಾರೆ.
ಟಿಟಿ ಕೂಡಲೇ ಕೋಜಿಕ್ಕೋಡ್ ನಿಲ್ದಾಣದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲು ನಿಲ್ದಾಣಕ್ಕೆ ಬಂದಾಗ ನಿಲ್ಲಿಸಿ ಹಾವು ಹಿಡಿಯುವ ಪರಿಣಿತರ ಮೂಲಕ ತಪಾಸಣೆ ನಡೆಸಲಾಗಿದೆ. ಆದರೆ ಹಾವು ಕಂಡು ಬಂದಿಲ್ಲ.
ಹಾವಿನ ಫೋಟೋವನ್ನು ವೀಕ್ಷಿಸಿದ ಅರಣ್ಯಾಧಿಕಾರಿಗಳು ಇದು ಇಲಿ ಹಾವಾಗಿದ್ದು, ಅಪಾಯಕಾರಿಯಲ್ಲ. ಬಹುಶಃ ರಂಧ್ರದೊಳಗೆ ನುಸುಳಿರಬಹುದು ಎಂದು ಹೇಳಿ ಅದನ್ನು ಮುಚ್ಚಿದ್ದಾರೆ. ಬಳಿಕ ರೈಲು ಪ್ರಯಾಣವನ್ನು ಮುಂದುವರಿಸಿದೆ. ಆದರೆ ಆ ಬೋಗಿಯಲ್ಲಿದ್ದ ಪ್ರಯಾಣಿಕರು ಮಾತ್ರ ಭಯದಿಂದಲೇ ಕುಳಿತಿದ್ದರು ಎಂದು ಹೇಳಲಾಗಿದೆ.