ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರದ ಹೋಲಿ ರೆಡಿಮರ್ ಪ್ರೌಢಶಾಲೆ ವಿದ್ಯಾರ್ಥಿನಿಯ ಶಾಲಾ ಬ್ಯಾಗ್ ನಲ್ಲಿ ಹಾವು ಪತ್ತೆಯಾಗಿದೆ.
ಸಾವಂತೂರು ಗ್ರಾಮದ ಭಾವನಾ ಗುರುವಾರ ಬೆಳಗ್ಗೆ ಶಾಲೆಗೆ ಬಂದಿದ್ದು, ಮಧ್ಯಾಹ್ನದ ವೇಳೆ ಬ್ಯಾಗ್ ಒಳಗೆ ಕೈ ಹಾಕಿದಾಗ ಹಾವು ಇರುವುದು ಕಂಡು ಬಂದಿದೆ. ತಕ್ಷಣವೇ ಶಿಕ್ಷಕರಿಗೆ ವಿಷಯ ತಿಳಿಸಿ ಹಾವು ಹೊರ ತೆಗೆದು ದೂರದ ಸ್ಥಳದಲ್ಲಿ ಬಿಡಲಾಗಿದೆ. ಅದಕ್ಕಿಂತ ಮೊದಲು ಅನೇಕ ಸಲ ಪುಸ್ತಕ, ಪೆನ್ ತೆಗೆದುಕೊಳ್ಳಲು ಬ್ಯಾಗ್ ಒಳಗೆ ಕೈ ಹಾಕಿದ್ದರೂ ಹಾವು ಇರುವುದು ಗೊತ್ತಾಗಿಲ್ಲ. ಅದರಿಂದ ಯಾವುದೇ ತೊಂದರೆ ಆಗಿಲ್ಲ.
ಮಾಹಿತಿ ತಿಳಿದು ಕೃಷ್ಣಮೂರ್ತಿ ಶಾಲೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.