
ಶಿವಮೊಗ್ಗ: ಶಿವಮೊಗ್ಗದ ಹೊನ್ನಾಳಿ ರಸ್ತೆ ಚೌಡೇಶ್ವರಿ ಕಾಲೋನಿಯಯಲ್ಲಿ ಹಾವು ಹಿಡಿಯಲು ಹೋಗಿದ್ದ ವೇಳೆ ಮಹಿಳಾ ಕಾರ್ಮಿಕರಿಬ್ಬರು ಮೈಮೇಲೆ ನಾಗದೇವರು ಬಂದಂತೆ ವರ್ತಿಸಿದ ಘಟನೆ ನಡೆದಿದೆ.
ನಗರದ ಶಂಕರ ರೇಂಜ್ ನರ್ಸರಿಯಲ್ಲಿ ಹಾವು ಕಾಣಿಸಿಕೊಂಡಿದ್ದು, ಮಾಹಿತಿ ಮೇರೆಗೆ ಅದನ್ನು ಹಿಡಿಯಲು ಉರಗ ರಕ್ಷಕ ಸ್ನೇಹ ಕಿರಣ್ ತೆರಳಿದ್ದಾರೆ. ಈ ವೇಳೆ ಇಬ್ಬರು ಮಹಿಳಾ ಕಾರ್ಮಿಕರು ಮೈಮೇಲೆ ದೇವರು ಬಂದ ರೀತಿ ವರ್ತಿಸಿ ನೆಲದ ಮೇಲೆ ಹಾವಿನಂತೆ ಹೊರಳಾಡಿದ್ದು, ವಿಡಿಯೋ ವೈರಲ್ ಆಗಿದೆ.
ನರ್ಸರಿಯಲ್ಲಿ ಕಾಣಿಸಿಕೊಂಡ ನಾಗರಹಾವನ್ನು ಹಿಡಿದ ಸ್ನೇಹ ಕಿರಣ್ ಬೇರೆ ಕಡೆಗೆ ಅದನ್ನು ಬಿಡಲು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿದ ವೇಳೆ ಅಲ್ಲೇ ಕೆಲಸ ಮಾಡುತ್ತಿರುವ ಇಬ್ಬರು ಮಹಿಳೆಯರು ವಿಚಿತ್ರವಾಗಿ ವರ್ತಿಸಿ ಕೂಗಾಡಿದ್ದಾರೆ. ನಾನು ನಿಮ್ಮನ್ನು ಕಾಯಲು ಬಂದಿದ್ದೇನೆ. ನನ್ನನ್ನು ಹೊರಗೆ ಕಳುಹಿಸುತ್ತೀರಾ ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ.
ಆಗ ಕೆಲವರು ಹಾವನ್ನು ಇಲ್ಲಿಯೇ ಬಿಡಿ ಎಂದು ಸ್ನೇಹ ಕಿರಣ್ ಅವರಿಗೆ ಹೇಳಿದ್ದಾರೆ. ಕಿರಣ್ ಅವರು ಆ ರೀತಿ ಏನೂ ಆಗುವುದಿಲ್ಲ ಎಂದು ತಿಳಿಸಿ ಸುರಕ್ಷಿತ ಸ್ಥಳಕ್ಕೆ ಹಾವು ಬಿಟ್ಟಿದ್ದಾರೆ. ಕೆಲ ಸಮಯದ ನಂತರ ಮಹಿಳೆಯರು ಸಹಜ ಸ್ಥಿತಿಗೆ ಮರಳಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.