ಬಳ್ಳಾರಿ: ಕಂಪ್ಲಿ ತಾಲೂಕಿನ ಯುವಕನೊಬ್ಬ ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದನ್ನು ಕಂಡು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನ ಗಾಬರಿ ಬಿದ್ದಿದ್ದಾರೆ.
ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿಯ ಕಾಡಪ್ಪ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ನಾಗರಹಾವು ಕಚ್ಚಿದ್ದು, ಜೀವಂತ ಹಾವನ್ನು ಹಿಡಿದುಕೊಂಡು ಸಂಬಂಧಿ ಜೊತೆಗೆ ಬೈಕ್ ನಲ್ಲಿಆಸ್ಪತ್ರೆಗೆ ಬಂದಿದ್ದಾನೆ.
ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದ್ದ ವೈದ್ಯರು, ಸಿಬ್ಬಂದಿ, ಜನ ಜೀವಂತ ಹಾವನ್ನು ಕಂಡು ಗಾಬರಿಯಾಗಿದ್ದಾರೆ. ಹಾವನ್ನು ಕೆಳಗೆ ಬಿಡುವಂತೆ ವೈದ್ಯರು ಸೂಚಿಸಿದ್ದು, ಕಾಡಪ್ಪ ಹಾವನ್ನು ಕೆಳಗೆ ಬಿಡುತ್ತಿದ್ದಂತೆ ಅಲ್ಲಿದ್ದವರು ಹೊಡೆದು ಸಾಯಿಸಿದ್ದಾರೆನ್ನಲಾಗಿದೆ. ಕಾಡಪ್ಪನಿಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿದೆ.